ನ್ಯೂಸ್

VIDEO| ಲೈವ್​ ರಿಪೋರ್ಟ್​ ನೀಡುವಾಗ ವರದಿಗಾರ್ತಿಯನ್ನು ಬೆದರಿಸಿ ಮೊಬೈಲ್​ ದೋಚಿ ಪರಾರಿ!

ಸಾವೋಪೌಲೊ: ಸಿಎನ್​ಎನ್​ ನ್ಯೂಸ್​ ಚಾನೆಲ್​ಗೆ ಲೈವ್​ ರಿಪೋರ್ಟ್​ ನೀಡುತ್ತಿದ್ದ ಬ್ರೆಜಿಲ್​ನ ವರದಿಗಾರ್ತಿಯನ್ನು ವ್ಯಕ್ತಿಯೊಬ್ಬ ಬೆದರಿಸಿ ಆಕೆಯ ಎರಡು ಮೊಬೈಲ್​ ಫೋನ್​ಗಳನ್ನು ಕಸಿದುಕೊಂಡ ವಿಡಿಯೋ ಭಾರಿ ವೈರಲ್​ ಆಗಿದೆ.

ಬ್ರೂನಾ ಮ್ಯಾಸೆಡೊ ಎಂಬ ಸಿಎನ್​ಎನ್​ ಬ್ರೆಜಿಲ್​ ವರದಿಗಾರ್ತಿ, ಭಾರಿ ಮಳೆ ಹಿನ್ನೆಲೆಯಲ್ಲಿ ಟೆಟೆ ನದಿ ತುಂಬಿ ಹರಿಯುತ್ತಿರುವುದರಿಂದ ಸಾವೋಪೌಲೊದ ಬಂಡೇರಾಸ್ ಸೇತುವೆ ಬಳಿ ನಿಂತು ಶನಿವಾರ ಬೆಳಗ್ಗೆ ಲೈವ್​ ರಿಪೋರ್ಟ್​ ಮಾಡುತ್ತಿದ್ದರು.

ಮ್ಯಾಸೆಡೊ ಅವರು ಸಿಎನ್​ಎನ್​ ಆ್ಯಂಕರ್​ ರಫೇಲ್​ ಕೊಲಂಬೋ ಅವರಿಗೆ ಲೈವ್ ರಿಪೋರ್ಟ್​ ನೀಡುವಾಗ​ ಶಂಕಿತನೊಬ್ಬ ಸೇತುವೆ ಮೇಲೆ ನಿಂತು ಗಮನಿಸುತ್ತಿರುತ್ತಾನೆ. ಈ ವೇಳೆ ಮತ್ತೊಬ್ಬ ವರ್ದಿಗಾರ್ತಿಯ ಬಳಿ ರಿಪೋರ್ಟ್​ ಪಡೆಯುವ ಸಮಯದಲ್ಲಿ ಮ್ಯಾಸೆಡೊರನ್ನು ಎರಡು ನಿಮಿಷಗಳ ಕಾಲ ಹಾಗೇ ನಿಲ್ಲುವಂತೆ ಹೇಳಲಾಗಿರುತ್ತದೆ.

ಈ ಸಮಯದಲ್ಲಿ ವ್ಯಕ್ತಿಯೊಬ್ಬ ನಿಧಾನವಾಗಿ ರಿಪೋರ್ಟರ್​ ಬಳಿ ಬರುತ್ತಾನೆ. ಬಳಿಕ ಆತ ಚಾಕು ತೆಗೆಯುವುದನ್ನು ನೋಡಿ ಮ್ಯಾಸೆಡೊ ಶಾಕ್​ ಆಗಿ ಎರಡು ಹೆಜ್ಜೆ ಹಿಂದೆ ಸರಿಯುತ್ತಾರೆ. ಬಳಿಕ ಆತ, ಎರಡು ಸೆಲ್​ಫೋನ್​ ನೀಡುವಂತೆ ಮ್ಯಾಸೆಡೊ ಬಳಿ ಒತ್ತಾಯಿಸುತ್ತಾನೆ. ಮೊದಲೇ ಹೆದರಿದ್ದ ಆಕೆ ತುಟಿ ಬಿಚ್ಚದೇ ತನ್ನೆರಡು ಮೊಬೈಲ್​ ಫೋನ್​ ಕೊಡುತ್ತಾಳೆ. ಅದನ್ನು ಪಡೆದ ಆತ ಅಲ್ಲಿಂದ ಪರಾರಿಯಾಗುತ್ತಾನೆ.

ಅದೃಷ್ಟವಶಾತ್​ ಮ್ಯಾಸೆಡೋ ಅವರಿಗೆ ಯಾವುದೇ ಅಪಯಾವಾಗಿಲ್ಲ. ಘಟನೆ ಬಳಿಕ ಆಕೆ ಸಿಎನ್​ಎನ್​ ಕೇಂದ್ರಕ್ಕೆ ಮರಳಿದ್ದಾಳೆ. ಪೊಲೀಸ್​ ದೂರು ನೀಡಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್​) (ವಿಡಿಯೋ ಕೃಪೆ: ಡೈಲಿ ಮೇಲ್​)