ನ್ಯೂಸ್

ರಾಜ್ಯಸಭಾ ಚುನಾವಣೆ; ಮತವಿಲ್ಲದಿದ್ದರೂ ಅಭ್ಯರ್ಥಿಯನ್ನು ನಿಲ್ಲಿಸಿರುವ ಜೆಡಿಎಸ್​ಗೆ ಆತ್ಮಸಾಕ್ಷಿ ಇದೆಯೇ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇಂದು ಬೆಳಗ್ಗೆಯಿಂದಲೇ ರಾಜ್ಯಸಭೆ ಚುನಾವಣೆ‌ಗೆ ವೋಟಿಂಗ್ ಆರಂಭಗೊಂಡಿದ್ದು, ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಎನ್​ಡಿಎ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಸ್ಫರ್ಧಿಸಿದ್ದು, ಕಾಂಗ್ರೆಸ್​ ಶಾಸಕರ ಬಳಿ ಮತಯಾಚಿಸಿದ ಆರೋಪ ಕೇಳಿ ಬಂದಿದೆ.

ಮತವಿಲ್ಲದಿದ್ದರೂ ಅಭ್ಯರ್ಥಿಯನ್ನು ನಿಲ್ಲಿಸಿ ನಮ್ಮ ಶಾಸಕರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ನಮ್ಮ ಶಾಸಕರಿಗೆ ಆಸೆ-ಆಮಿಷ ತೋರಿಸಿ ಬೆದರಿಸಿದ್ದಾರೆ. ಅದಕ್ಕೆ ಎಫ್​ಐಆರ್​ ದಾಖಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ಗೆ ಗೆಲ್ಲಲು 45 ಮತಗಳ ಅಗತ್ಯವಿದೆ. ಅಷ್ಟು ಸಂಖ್ಯೆಯ ಮತಗಳು ಅವರ ಬಳಿ ಇದೆಯೇ? ಮತವಿಲ್ಲದಿದ್ದರೂ ಅಭ್ಯರ್ಥಿಯನ್ನು ನಿಲ್ಲಿಸಿ ನಮ್ಮ ಶಾಸಕರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಅವರಿಗೆ ಆತ್ಮಸಾಕ್ಷಿ ಇದೆಯೇ. ನಮ್ಮವರಿಗೆ ಬೆದರಿಕೆ ಹಾಕಿರುವುದಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್ ಹಾಕಲಾಗಿದೆ. ನಮ್ಮ ಮೂವರು ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಈ ಬಗ್ಗೆ ಯಾವ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣೆಗೆ ನಿಲ್ಲುವವರೆಲ್ಲಾ ಗೆಲ್ಲುತ್ತೇವೆ ಅಂತಾನೇ ಹೇಳುವುದು, ಸೋಲುತ್ತೇವೆ ಅಂತ ಅಲ್ಲ. ನಮ್ಮ ‌ಪ್ರಕಾರ ಅಭ್ಯರ್ಥಿ ಹಾಕಬಾರದಿತ್ತು, ಹಾಕಿದ್ದಾರೆ. ನಮ್ಮ ಕಡೆ 135+1 ಶಾಸಕರ ಮತಗಳಿವೆ. ಪಕ್ಷೇತರರಾದ ಲತಾ, ದರ್ಶನ್, ಪುಟ್ಟಣ್ಣಯ್ಯ, ಪುಟ್ಟ ಸ್ವಾಮಿ‌ಗೌಡ ಮತ್ತು ಜನಾರ್ದನ ರೆಡ್ಡಿ ನಮ್ಮ ಜೊತೆ ಇದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯವರು ಆಮಿಷ, ಬೆದರಿಕೆ ನೀಡುವುದು‌, ನಾವಲ್ಲ ಎಂದು ಹೇಳಿದ್ದಾರೆ.