ನ್ಯೂಸ್

ಸರ್ಕಾರಿ ಯೋಜನೆಗಳನ್ನು ಮೆಚ್ಚಿ ಸಿಎಂಗೆ ಪತ್ರ; ಖುದ್ದಾಗಿ ಬಾಲಕಿಯನ್ನು ಭೇಟಿ ಮಾಡಿದ ಸಿದ್ದರಾಮಯ್ಯ

ಧಾರವಾಡ: ರಾಜ್ಯ ಸರ್ಕಾರದ ಯೋಜನೆಗಳನ್ನು ಶ್ಲಾಘಿಸಿ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು, ಮಳಲಿ ಗ್ರಾಮದ ವಿದ್ಯಾರ್ಥಿನಿ ಆಶಾ ಪಾಟೀಲ್​ ಅವರನ್ನು ಮುಖ್ಯಮಂತ್ರಿಗಳು ಇಂದು ಖುದ್ದಾಗಿ ಭೇಟಿ ಮಾಡಿ, ಧನ್ಯವಾದ ತಿಳಿಸಿರುವುದು ಇದೀಗ ಅನೇಕರ ಗಮನ ಸೆಳೆದಿದೆ.

ಪತ್ರದಲ್ಲಿ ಮೊಟ್ಟೆ ವಿತರಣೆ ವಿಸ್ತರಿಸಿದ್ದ ಬಗ್ಗೆ ಪ್ರತ್ಯೇಕವಾಗಿ ಉಲ್ಲೇಖಿಸಿ, ರಾಜ್ಯ ಸರ್ಕಾರದ ಇತರ ಯೋಜನೆಗಳನ್ನು ಬಾಲಕಿ ಶ್ಲಾಘಿಸಿದ್ದಾರೆ. ಇಂದು ಧಾರವಾಡದಲ್ಲಿ ನಡೆದ ಕೃಷಿ ಮೇಳ ಉದ್ಘಾಟನೆಗೆ ಆಗಮಿಸಿದ್ದ ಸಿಎಂ, ವಿದ್ಯಾರ್ಥಿನಿ ಆಶಾ ಅವರನ್ನು ಖುದ್ದಾಗಿ ಭೇಟಿ ಮಾಡಿ, ಧನ್ಯವಾದ ತಿಳಿಸಿದರು. ಈ ಕುರಿತು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್​ವೊಂದನ್ನು ಕೂಡ ಹಂಚಿಕೊಂಡಿದ್ದಾರೆ.

"ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ (ಮೊಟ್ಟೆ) ನೀಡುವುದೂ ಸೇರಿದಂತೆ ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಶ್ಲಾಘಿಸಿ ಪತ್ರ ಬರೆದಿದ್ದ ಧಾರವಾಡ ಜಿಲ್ಲೆ, ಕುಂದಗೋಳದ ಆಶಾ ನೆಹರು ಪಾಟೀಲ್ ಎಂಬ ವಿದ್ಯಾರ್ಥಿನಿಯನ್ನು ಇಂದು ಭೇಟಿ ಮಾಡಿದೆ. ಕೃಷಿ ಮೇಳ ಉದ್ಘಾಟನೆಗೆ ಧಾರವಾಡಕ್ಕೆ ತೆರಳಿದ್ದ ವೇಳೆಯಲ್ಲಿ ವಿದ್ಯಾರ್ಥಿನಿಯನ್ನು ಭೇಟಿಯಾಗಿ ಮಾತನಾಡಿದ್ದು ನನಗೆ ಖುಷಿ ಕೊಟ್ಟಿದೆ" ಎಂದು ಹೇಳಿದ್ದಾರೆ.

"ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳು, ವಿದ್ಯಾರ್ಥಿಸ್ನೇಹಿ ಕಾರ್ಯಕ್ರಮಗಳ ಮೂಲಕ ನಾಡಿನ ಜನತೆಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಸ್ವಾವಲಂಬಿ ಬದುಕಿನ ಕನಸಿಗೆ ಬೆಂಬಲವಾಗಿ ನಿಂತಿದೆ. ನಮ್ಮ ಈ ಯೋಜನೆಗಳ ಫಲಾನುಭವಿಯಾದ ಪುಟ್ಟ ಹುಡುಗಿಯೊಬ್ಬಳು ನನ್ನೊಂದಿಗೆ ಪತ್ರದ ಮೂಲಕ ತನ್ನ ಸಂತಸ ಹಂಚಿಕೊಂಡು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಳು. ಪತ್ರ ಓದಿದಾಗಿಂದ ಆ ಮಗುವನ್ನು ಒಮ್ಮೆ ಭೇಟಿಯಾಗಬೇಕೆಂದು ಬಯಸಿದ್ದೆ, ಅದು ಇಂದು ಸಾಧ್ಯವಾಯಿತು" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

"ಇಂತಹ ಮುಗ್ಧ ಮಕ್ಕಳ ಭವಿಷ್ಯದ ಕನಸುಗಳು ನಮ್ಮ ಸರ್ಕಾರದ ಕೈಗಳಲ್ಲಿ ಸುರಕ್ಷಿತವಾಗಿದೆ. ಈ ಮಕ್ಕಳ ಕನಸನ್ನು ನನಸು ಮಾಡುವುದು ನಮ್ಮ ಕರ್ತವ್ಯವೆಂದು ಭಾವಿಸಿ, ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇವೆ" ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.