ನ್ಯೂಸ್

ಈ ರೀತಿಯ ಪ್ರಯೋಗ ಬೇಡ: ಸಿಎಂ ಸಿದ್ದುಗೆ ಕಾಂಗ್ರೆಸ್‌ ಮಾಜಿ ಮೇಯರ್, ಕಾರ್ಪೊರೇಟರ್‌ಗಳ ಸಲಹೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್​ ಬೆಂಗಳೂರು ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿದ್ದು, ಬಿಬಿಎಂಪಿ ಚುನಾವಣೆ ಮೇಲೆ ಕಾಂಗ್ರೆಸ್​ ಕಣ್ಣಿಟ್ಟಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಮಾಜಿ ಮೇಯರ್ ಹಾಗೂ ಕಾರ್ಪೊರೇಟರ್‌ಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಭೆ ನಡೆಸಿದರು.

ಸಭೆಯಲ್ಲಿ ಬೆಂಗಳೂರು ವಿಭಜನೆ ಮಾತುಕತೆ ನಡೆದಿದೆ. ಬೃಹತ್ ಬೆಂಗಳೂರನ್ನು ಮೂರು ವಲಯಗಳನ್ನಾಗಿ ವಿಂಗಡಿಸಿದರೆ ಹೇಗೆ? ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿ, ಕಾಂಗ್ರೆಸ್​ನ ಮಾಜಿ ಮೇಯರ್ ಹಾಗೂ ಕಾರ್ಪೊರೇಟರ್‌ಗಳ ಸಲಹೆ ಕೇಳಿದರು.

ನಿಭಾಯಿಸುವುದು ಕಷ್ಟ

ಇಡೀ ಬೃಹತ್ ಬೆಂಗಳೂರಿಗೆ ಒಬ್ಬರೇ ಮೇಯರ್ ಇರುವುದರಿಂದ ಆಡಳಿತಾತ್ಮಕವಾಗಿ ನಿಭಾಯಿಸುವುದು ಕಷ್ಟ. ಮೂವರು ಮೇಯರ್ ಹಾಗೂ ಆಯುಕ್ತರಿದ್ದರೆ ಆಡಳಿತ ನಿರ್ವಹಿಸಬಹುದು. ಅಧಿಕಾರಿಗಳು ತಮಗೆ ನೀಡಿರುವ ವರದಿಯಲ್ಲಿ ಇದನ್ನು ತಿಳಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​ನ ಮಾಜಿ ಕಾರ್ಪೋರೇಟರ್‌ಗಳು, ಯಾವುದೇ ಕಾರಣಕ್ಕೂ ಈ ರೀತಿಯ ಪ್ರಯೋಗಕ್ಕೆ ಕೈಹಾಕುವುದು ಬೇಡ ಎಂದು ಸಲಹೆ ನೀಡಿದ್ದಾರೆ.

ಒಪ್ಪಲು ತಯಾರಿಲ್ಲ

ಬಿಬಿಎಂಪಿಗೆ ಕಾರ್ಪೊರೇಟರ್​ಗಳು ಇಲ್ಲದೆ ಅಭಿವೃದ್ಧಿ ಕುಂಠಿತವಾಗಿದೆ. ದಯವಿಟ್ಟು ಮೊದಲು 198 ವಾರ್ಡ್​ಗಳಿಗೆ ಚುನಾವಣೆ ನಡೆಸಿ, ಹೇಗಿದ್ದರೂ ನಮ್ಮದೇ ಪಕ್ಷ ಅಧಿಕಾರದಲ್ಲಿದೆ. ಬಿಬಿಎಂಪಿ ಚುಕ್ಕಾಣಿಯನ್ನೂ ನಾವೇ ಹಿಡಿಯಲು ಸಹಕಾರಿಯಾಗಲಿದೆ ಎಂದು ಮಾಜಿ ಮೇಯರ್​ಗಳು ಹೇಳಿದ್ದಾರೆ. ಆದರೆ, ಎಲ್ಲ 243 ವಾರ್ಡ್‌ಗಳಿಗೂ ಚುನಾವಣೆ ನಡೆಯಬೇಕಿದೆ ಎಂದು ಅಧಿಕಾರಿಗಳು ಹೇಳಿದರೆ, ಮಾಜಿ ಮೇಯರ್​ಗಳು ಮಾತ್ರ ಇದಕ್ಕೆ ಒಪ್ಪಲು ತಯಾರಿಲ್ಲ.

ಸದ್ಯಕ್ಕೆ 198 ವಾರ್ಡ್​ಗಳಿಗೆ ಚುನಾವಣೆ ನಡೆಯಲಿ ಎಂದು ಮಾಜಿ ಮೇಯರ್​ಗಳು ಒತ್ತಾಯ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಅಂತಿಮವಾಗಿ ಕಾನೂನು ತೊಡಕುಗಳನ್ನು ನಿವಾರಿಸಿ ಚುನಾವಣೆ ನಡೆಸೋಣ ಎಂದು ಸಭೆಯಲ್ಲಿ ಹೇಳಿದ್ದಾರೆ.