ನ್ಯೂಸ್

ಮುಡಾ ಹಗರಣ; ಎರಡನೇ ಬಾರಿಗೆ ಸಿಎಂ ಆಗಿದ್ದನ್ನು ಸಹಿಸದೆ ಕೆಲವರು ಆರೋಪ ಮಾಡುತ್ತಿದ್ದಾರೆ: ಸಿದ್ದರಾಮಯ್ಯ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಸಿಎಂ ಸಿದ್ದರಾಮಯ್ಯಗೆ ಉರುಳಾಗಿ ಪರಿಣಮಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್​ ನಡುವಿನ ವಾಕ್ಸಮರಕ್ಕೆ ಆಸ್ದದ ಮಾಡಿಕೊಟ್ಟಿದೆ. ಇನ್ನೂ ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ. ನಮ್ಮ ಕಾಲದಲ್ಲೂ ತಪ್ಪುಗಳು ಆಗಿದೆ. ಆದರೆ, ಬಿಜೆಪಿಯವರ ಕಾಲದಲ್ಲೇ ಹೆಚ್ಚು ತಪ್ಪಾಗಿರುವುದು. ಅದನ್ನು ಸರಿಪಡಿಸುತ್ತೇನೆ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಸಿಎಂ ಮುಡಾ ಗೆಬ್ಬೆದ್ದು ಹೋಗಿದೆ. ಮೊದಲು ಅದನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತೇನೆ. ಈಗಾಗಲೇ ತನಿಖೆಗೆ ಆದೇಶಿಸಿದದದೇವೆ ವರದಿ ಬಂದ ನಂತರ ಅದನ್ನು ಆಧರಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ.

ನನ್ನ ಪತ್ನಿಗೆ ಬದಲಿ ನಿವೇಶನ ಕೊಟ್ಟ ವಿಷಯದಲ್ಲಿ ಬಿಜೆಪಿಯವರು ರಾಜಕೀಯವನ್ನು ಮುಂದುವರಿಸಿದರೆ ನಾವೂ ರಾಜಕೀಯವಾಗಿಯೇ ಮುಂದುವರಿಯಬೇಕಾಗುತ್ತದೆ. ಅವರಿಗೆ ಹೇಗೆ ಎದಿರೇಟು ಕೊಡಬೇಕು ಎನ್ನುವುದು ಗೊತ್ತಿದೆ. ನಾವು ಕಾನೂನಾತ್ಮಕವಾಗಿದ್ದೇವೆ. ಕಾನೂನಿಗೆ ವಿರುದ್ಧವಾಗಿ ಆಗಿರುವುದೆಲ್ಲಿ ಎನ್ನುವುದನ್ನು ಬಿಜೆಪಿಯವರು ತೋರಿಸಲಿ ಎಂದು ಸವಾಲೆಸೆದಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದ ಸಮಿತಿಯಿಂದ ತನಿಖೆ ನಡೆಯುತ್ತಿದೆ‌. ವರದಿ ಬಂದ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇನೆ. ನಮ್ಮ ಕಾಲದಲ್ಲೂ ತಪ್ಪುಗಳು ಆಗಿವೆ. ಬಿಜೆಪಿ ಕಾಲದಲ್ಲೇ ಹೆಚ್ಚು ತಪ್ಪುಗಳಾಗಿವೆ. ಶೇ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ವಿಷಯವನ್ನು ಆಯುಕ್ತರಾದಿಯಾಗಿ ಯಾರೂ ದುರುಪಯೋಗ ಮಾಡಿಕೊಳ್ಳದಂತೆ ಸರಿಪಡಿಸುತ್ತೇವೆ. ಸೈಟ್​ ಹಂಚಿಕೆ ವಿಚಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸಿಎಂ ಹೇಳಿದ್ದಾರೆ.

ಎರಡನೇ ಬಾರಿ ಸಿಎಂ ಆಗಿದ್ದಕ್ಕೆ ಸಹಿಸಲು ಕೆಲವರಿಗೆ ಆಗುತ್ತಿಲ್ಲ. ಹಿಂದುಳಿದ ವರ್ಗದ ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೊಟ್ಟೆ ಕಿಚ್ಚಿನಿಂದ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಮೇಲೆ ಆರೋಪ ಮಾಡಲು ಬೇರೆ ಏನೂ ಇಲ್ಲ, ಹೀಗಾಗಿ ಈ ವಿಚಾರವನ್ನು ಮುಂದಿಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ. ಕಾನೂನಾತ್ಮಕವಾಗಿ ಆಗಿದ್ದನ್ನು ಅಕ್ರಮವೆಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆಲ್ಲ ಹೆದರುತ್ತೀನಾ, ಇದರಿಂದ ನನ್ನ ಹೆದರಿಸಲು ಸಾಧ್ಯವಿಲ್ಲಾ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.