ಮೈಸೂರು: ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ರಾಜಕೀಯ ವಿಷಯ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ,
"ವಿರೋಧಪಕ್ಷಗಳು ನನ್ನನ್ನು ಸಮಾಧಿ ಮಾಡಲು ಹೊರಟಿವೆ. ನೀವು ನನ್ನನ್ನು ಕಾಪಾಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ದುರಂತವೇ ಸರಿ. ವಿರೋಧ ಪಕ್ಷದವರು ಯಾರನ್ನೂ ಸಮಾಧಿ ಮಾಡುವುದಿಲ್ಲ, ಮೋದಿ ಅವರನ್ನು ರಾಜಕೀಯವಾಗಿ ವಿರೋಧ ಮಾಡುತ್ತಿದ್ದೇವೆ ಅಷ್ಟೆ" ಎಂದು ಹೇಳಿದರು.
ಇದನ್ನೂ ಓದಿ: ಪಂದ್ಯದ ಮಧ್ಯೆ ತನ್ನ ಪಾದ ಸ್ಪರ್ಶಿಸಿದ ಫ್ಯಾನ್ಗೆ ಧೋನಿ ಹೇಳಿದ ಕಿವಿಮಾತಿದು; ನೀವಿಲ್ಲದ ಐಪಿಎಲ್ ಏನೇನೂ ಅಲ್ಲ…
"ನರೇಂದ್ರ ಮೋದಿ ಹತ್ತು ವರ್ಷ ಪ್ರಧಾನಿಗಳಾಗಿ ಬಡವರ ಪರವಾಗಿ ಏನೂ ಮಾಡಿಲ್ಲ ಎನ್ನುವುದು ಹಾಗು ಸುಳ್ಳಿನ ಸರದಾರ ಎನ್ನುವುದು ಮಾತ್ರ ನಮ್ಮ ಆರೋಪ. ಜನರಿಗೆ ನೀಡಿದ್ದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ರಾಜಕೀಯವಾಗಿ ಅವರನ್ನು ಸೋಲಿಸಬೇಕು ಎನ್ನುವುದು ವಿರೋಧ ಪಕ್ಷಗಳ ಗುರಿ. ಏಕೆಂದರೆ ಈ ದೇಶದ ಆರ್ಥಿಕತೆ ಸುಧಾರಣೆಯಾಗಬೇಕು, ಬಡವರು ಉಳಿಯಬೇಕು" ಎಂದರು.
"ಪ್ರಧಾನಿಗಳು ತಾವು ಸೋಲುತ್ತೇವೆ ಎಂದು ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಅವರ ಭಾವನಾತ್ಮಕ ಆಟ ಜನರಿಗೆ ಗೊತ್ತಾಗಿದೆ. ಜನರಿಗೆ ತಿಳಿದ ಮೇಲೆ ಪುನಃ ಅದೇ ತಪ್ಪನ್ನು ಜನತೆ ಮಾಡುವುದಿಲ್ಲ. ರಾಜಕೀಯದಲ್ಲಿ ಮೇಲಕ್ಕೇರಿದವರು ಕೆಳಕ್ಕೆ ಇಳಿಯಲೇಬೇಕು, ಕೆಳಗಿದ್ದವನು ಮೇಲೆ ಏರಲೇಬೇಕು" ಎಂದು ಹೇಳುವ ಮುಖೇನ ಟಾಂಗ್ ಕೊಟ್ಟಿದ್ದಾರೆ.