ಬೆಂಗಳೂರು: ದೇಶದಲ್ಲಿ 18ನೇ ಸಾರ್ವತ್ರಿಕ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದು, ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇಂದು (ಏಪ್ರಿಲ್ 26) ನಡೆಯುತ್ತಿದೆ. ಎರಡನೇ ಹಂತದಲ್ಲಿ ಒಟ್ಟು 13 ರಾಜ್ಯಗಳ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಕರ್ನಾಟಕದಲ್ಲಿ ಇದು ಮೊದಲ ಹಂತದ ಮತದಾನವಾಗಿದೆ. 88 ಕ್ಷೇತ್ರಗಳಲ್ಲಿ 1200ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದು, ಮತದಾರರು ಅವರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ರಾಜ್ಯ ಸರ್ಕಾರದ ಬಗ್ಗೆ ಜನರು ಸಂತೃಪ್ತಿಯನ್ನು ಹೊಂದಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಜಯಗಳಿಸಲಿದೆ. ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ನಾವು ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲಿದ್ದಾರೆ. ಮಹಿಳೆಯರ ಒಲವು ಕಾಂಗ್ರೆಸ್ ಪರವಾಗಿದೆ.
ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ದೊರಕಿದೆ. ಎಲ್ಲರೂ ಸಂತೋಷವಾಗಿದ್ದಾರೆ. ಎಲ್ಲದಕ್ಕಿಂತಲೂ ಮಹಿಳೆಯರು ಮನೆಯ ಬೆಳಕಾಗಿದ್ದು, ತಮ್ಮ ತಮ್ಮ ಕುಟುಂಬವನ್ನು ನೋಡಿಕೊಳ್ಳುತ್ತಾರೆ. ಅವರೆಲ್ಲರು ಕಾಂಗ್ರೆಸ್‌ಗೆ ಮತ ಹಾಕಲು ಸಂತೋಷಪಡುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸಿದ್ದರಾಮನಹುಂಡಿಯಲ್ಲಿ ಮತ ಚಲಾಯಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಉತ್ತಮ ವಾತಾವರಣ ಇದ್ದು, 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ. ಜನರು ಗ್ಯಾರಂಟಿ ಯೋಜನೆಗಳ ಕೈ ಹಿಡಿಯಲಿದ್ದು, ಮೊದಲ ಹಂತದಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಬೆಲೆಯೇರಿಕೆ, ನಿರುದ್ಯೋಗ, ಬಡತನ, ಕೋಮುವಾದ, ದ್ವೇಷ ರಾಜಕೀಯಗಳನ್ನು ಕಿತ್ತೆಸೆದು ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮರುಸ್ಥಾಪನೆ ಮಾಡಲು ಮತ ಚಲಾಯಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.