ಲಾರಿಯೊಳಕ್ಕೆ ಸಿಲುಕಿ ನಜ್ಜುಗುಜ್ಜಾದ ಕಾರು 
ನ್ಯೂಸ್

ಲಾರಿಯೊಳಕ್ಕೇ ಸಿಲುಕಿತು ಅರ್ಧ ಕಾರು, 6 ಮಂದಿ ಸ್ಥಳದಲ್ಲೇ ಸಾವು: ಭೀಕರತೆಗೆ ಎದೆ ನಲುಗಿತು ಎಂದ ಸಿಎಂ, ಪರಿಹಾರ ಘೋಷಣೆ

ಕೊಪ್ಪಳ: ಲಾರಿ ಹಾಗೂ ಕಾರಿನ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾದ್ದಾರೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಅಪ್ಪಳಿಸಿದ ಕಾರಿನ ಅರ್ಧ ಭಾಗ ಲಾರಿಯೊಳಕ್ಕೇ ಸಿಲುಕಿಕೊಂಡಿದ್ದು, ಶವಗಳನ್ನು ಹೊರತೆಗೆಯುವುದೇ ಹರಸಾಹಸವಾಗಿ ಪರಿಣಮಿಸಿತ್ತು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಕೇರಿ ಬಳಿ ಲಾರಿ ಹಾಗೂ ಕಾರು ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ರಾಜಪ್ಪ ಬನಗೋಡಿ, ರಾಘವೇಂದ್ರ, ಅಕ್ಷಯ ಶಿವಶರಣ, ಜಯಶ್ರೀ, ರಾಖಿ, ರಶ್ಮಿಕಾ ಸ್ಥಳದಲ್ಲೇ ಸಾವಿಗೀಡಾದವರು. ಇವರು ಇಂಡಿಕಾ ಕಾರಿನಲ್ಲಿ ವಿಜಯಪುರದಿಂದ ಬೆಂಗಳೂರಿನತ್ತ ಹೊರಟಿದ್ದರು. ಮಾರ್ಗಮಧ್ಯೆ ಕಾರಿನ ಟಯರ್ ಸ್ಫೋಟಗೊಂಡು ರಸ್ತೆಯ ಇನ್ನೊಂದು ಬದಿಗೆ ಬಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ.

'ಕೊಪ್ಪಳ ಜಿಲ್ಲೆಯ ಕುಷ್ಟಗಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಎಳೆಯ ಮಕ್ಕಳು ಸೇರಿದಂತೆ 6 ಮಂದಿ ಸಾವಿಗೀಡಾದ ಸುದ್ದಿ ತಿಳಿದು ಎದೆ ನಲುಗಿತು. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಮೃತ ದುರ್ದೈವಿಗಳ ಕುಟುಂಬಕ್ಕೆ ಸರ್ಕಾರದಿಂದ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಅತಿಯಾದ ವೇಗ, ಅಜಾಗರೂಕತೆಗಳೇ ಇಂಥ ಅಪಘಾತಗಳಿಗೆ ಕಾರಣ, ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ, ಸುರಕ್ಷಿತವಾಗಿರಿ' ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.