ನ್ಯೂಸ್

ಸೋಮವಾರದಿಂದ ದೇಶದ 12 ಕಡೆಗಳಲ್ಲಿ ಕೋವಿಡ್​ ರೋಗಿಗಳಿಗೆ ದೇಶೀಯ ಕರೊನಾ ಲಸಿಕೆ ಪ್ರಯೋಗ

ನವದೆಹಲಿ: ಆಗಸ್ಟ್​ 15ಕ್ಕೆ ದೇಶೀಯ ಕರೊನಾ ಲಸಿಕೆ ಸಜ್ಜಾಗಲಿದೆ ಎಂಬ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಸಂಸದೀಯ ಸ್ಥಾಯಿ ಸಮಿತಿಗೆ ಸ್ಪಷ್ಟನೆ ನೀಡಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಸಂಶೋಧಕರು ಆಗಸ್ಟ್​ 15ಕ್ಕೆ ಲಸಿಕೆ ಸಜ್ಜುಗೊಳಿಸುವ ಮಹತ್ವಾಕಾಂಕ್ಷೆ ಹೊಂದಿದ್ದರು. ಆದರೆ, ಕನಿಷ್ಠ ಮುಂದಿನ ವರ್ಷಾರಂಭದವರೆಗೂ ಕರೊನಾ ನಿಗ್ರಹಕ್ಕೆ ದೇಶೀಯ ಲಸಿಕೆ ಸಜ್ಜಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಲಸಿಕೆ ಸಜ್ಜುಗೊಳಿಸುವಲ್ಲಿ ಉಂಟಾಗುವ ವಿಳಂಬವನ್ನು ತಪ್ಪಿಸಲು ಐಸಿಎಂಆರ್​ನಿಂದ ಪತ್ರ ಬರೆಯಲಾಗಿತ್ತು. ಇದರರ್ಥ ಯಾವುದೇ ಪ್ರಕ್ರಿಯೆಯನ್ನು ಕೈಬಿಡುವ ಉದ್ದೇಶವಿರಲಿಲ್ಲ ಎಂದು ಸ್ಥಾಯಿ ಸಮಿತಿಗೆ ಸ್ಪಷ್ಟಪಡಿಸಲಾಗಿದೆ.

ಸಂಸತ್​ನಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ಸಲಹೆಗಾರರು, ಅಧಿಕಾರಿಗಳು ಸಂಸದರಿಗೆ ಈ ವಿಷಯ ತಿಳಿಸಿದ್ದಾರೆ. ಭಾರತ ಲಸಿಕೆ ತಯಾರಿಕೆ ಹಾಗೂ ಜನರಿಕ್​ ಔಷಧ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಅಂತೆಯೇ ಕರೊನಾ ಲಸಿಕೆ ಕಂಡು ಹಿಡಿಯುವಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಬಾ ರಾಮ್​ದೇವ್​ ಅವರ ಕರೊನಾ ಔಷಧದ ಬಗ್ಗೆಯೂ ಸಮಿತಿ ಸದಸ್ಯರ ಪ್ರಶ್ನೆಗಳನ್ನು ಕೇಳಿದರೂ, ಅಧಿಕಾರಿಗಳು ಆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗಿದೆ.

ಸೋಮವಾರ (ಜು.13) ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್​ಅನ್ನು ಮಾನವರ ಮೇಲೆ ಪ್ರಯೋಗಿಸುವ ಕ್ಲಿನಿಕಲ್​ ಟ್ರಯಲ್​ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ಬೆಳಗಾವಿ ಸೇರಿ ದೇಶದ 12 ವೈದ್ಯಕೀಯ ಸಂಸ್ಥೆಗಳನ್ನು ಗುರುತಿಸಲಾಗಿದೆ. ಜು.7ರಿಂದಲೇ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತಿದೆ.