ನ್ಯೂಸ್

ಶುದ್ಧೀಕರಣ ಅಗತ್ಯ; ಕೆಪಿಎಸ್​ಸಿಗೆ ದಕ್ಷರನ್ನು ನೇಮಿಸಿ

Webdesk - Manjunatha B

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​ಸಿ) ಅಧ್ವಾನಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಲಂಚಾವತಾರ, ಪ್ರಶ್ನೆಪತ್ರಿಕೆ ಎಡವಟ್ಟಿನಂಥ ಸರಣಿ ಲೋಪಗಳು ಮುಂದುವರಿದಿದ್ದು, ಇತ್ತೀಚೆಗೆ ನಡೆದ ಪರೀಕ್ಷೆಗಳಲ್ಲೂ ತಪು್ಪ ಹಾಗೂ ಕಳಪೆ ಅನುವಾದದಿಂದ ಅಭ್ಯರ್ಥಿಗಳು ಪ್ರಶ್ನೆಯನ್ನೇ ಅರ್ಥಮಾಡಿಕೊಳ್ಳಲಾಗದೆ ಪರದಾಡಿದ್ದಾರೆ. ಒಎಂಆರ್ ಶೀಟ್​ನಲ್ಲೂ ಅಕ್ರಮ ನಡೆಸಲಾಗಿದ್ದು, ಅಧಿಕಾರಿಗಳ ಬೇಜವಾಬ್ದಾರಿ ಧೋರಣೆ ಬಯಲಾಗಿದೆ. ಈ ಕುರಿತಂತೆ ಮಂಗಳವಾರ ವಿಧಾನಸಭೆಯಲ್ಲಿ ಚರ್ಚೆ ನಡೆದು, ಪ್ರತಿಪಕ್ಷಗಳು ಮರುಪರೀಕ್ಷೆಗೆ ಆಗ್ರಹಿಸಿವೆ.

ಸದಾ ವಿವಾದ ಮತ್ತು ಸಮಸ್ಯೆಗಳಿಂದಲೇ ಚರ್ಚೆಯಲ್ಲಿ ಇರುವ ಕೆಪಿಎಸ್​ಸಿಯನ್ನು ಬಲಪಡಿಸಲು ಆಗದಿರುವುದು ವ್ಯವಸ್ಥೆಯ ವೈಫಲ್ಯವೇ ಸರಿ. ಪರೀಕ್ಷೆ ನಡೆಸುವ ಕ್ರಮದಲ್ಲಿ ಹಲವು ಸುಧಾರಣೆಗಳನ್ನು ತರಲು ಶೈಕ್ಷಣಿಕ ವಲಯದಲ್ಲಿ ಇತರೆಡೆ ಪ್ರಯತ್ನ ನಡೆಯುತ್ತಿರಬೇಕಾದರೆ, ಕೆಪಿಎಸ್​ಸಿಯಲ್ಲಿ ಮಾತ್ರ ಅದಕ್ಷ ಸಿಬ್ಬಂದಿಗೆ ಪರೀಕ್ಷೆ ನಡೆಸುವ ಹೊಣೆಗಾರಿಕೆ ವಹಿಸುತ್ತಿ ರುವುದು ದುರದೃಷ್ಟಕರ. ಕಡಿಮೆ ಓದಿದ, ಕೌಶಲ ಹೊಂದಿಲ್ಲದ ಸಿಬ್ಬಂದಿಯನ್ನು ಪರೀಕ್ಷೆ ಮೇಲ್ವಿಚಾರಣೆಗೆ ನೇಮಿಸಿದರೆ ಅಭ್ಯರ್ಥಿಗಳ ಪಾಡೇನು?

ಕೆಪಿಎಸ್​ಸಿ ಲೋಪಗಳ ಕುರಿತಂತೆ ಗುರುವಾರ ಸದನದ ಕಲಾಪದಲ್ಲಿ ದನಿ ಎತ್ತಿದ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ‘ಪರೀಕ್ಷೆಯ ಪ್ರಶ್ನೆಪತ್ರಿಕೆ ಮುದ್ರಣದಲ್ಲಿ 79 ತಪ್ಪುಗಳು ಕಂಡುಬಂದಿವೆ. ಗೂಗಲ್ ಅನುವಾದವನ್ನು ಬಳಸಿರುವುದು ನಾಚಿಕೆಗೇಡು. ಪ್ರಶ್ನೆಪತ್ರಿಕೆ ತುಂಬ ತಪು್ಪಗಳೇ ಇವೆ’ ಎಂಬುದನ್ನು ಉದಾಹರಣೆ ಸಮೇತ ವಿವರಿಸಿದರಲ್ಲದೆ, ‘ಮರುಪರೀಕ್ಷೆಗೆ 15 ಕೋಟಿ ರೂ. ಖರ್ಚಾಗಲಿದೆ ಅಂತ ಸಬೂಬು ಹೇಳಬಾರದು. ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸುವ ಮೂಲಕ ವಿಷಯದ ಗಂಭೀರತೆಯನ್ನು ಮನದಟ್ಟು ಮಾಡಿಸಿದ್ದಾರೆ.

ಉದ್ಯೋಗ ಗಿಟ್ಟಿಸಿ, ಉತ್ತಮ ಬದುಕು ರೂಪಿಸಿಕೊಳ್ಳುವ ಆಶಯದಲ್ಲಿ ಸಾವಿರಾರು ಅಭ್ಯರ್ಥಿಗಳು ಹಗಲು-ರಾತ್ರಿ ಕಷ್ಟಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗುತ್ತಾರೆ. ಆದರೆ, ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆಯಲ್ಲಿ ನಕಲು, ನಕಲಿ ಪ್ರವೇಶಪತ್ರ, ತಪು್ಪ ಪ್ರಶ್ನೆಪತ್ರಿಕೆ ಹೀಗೆ ಹಲವು ಅಪಸವ್ಯಗಳಿಂದ ಪರೀಕ್ಷಾ ವ್ಯವಸ್ಥೆಯೇ ಇತ್ತೀಚಿನ ದಿನಗಳಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಕೆಪಿಎಸ್​ಸಿ ನಿರ್ವಹಣೆಯಲ್ಲಿ ಗಂಭೀರ ಲೋಪಗಳಿವೆ ಎಂಬುದನ್ನು ಆಡಳಿತ ಪಕ್ಷದ ಸದಸ್ಯರೂ ಒಪು್ಪತ್ತಾರಾದರೂ, ಅದನ್ನು ಸರಿಪಡಿಸಲು, ಕೆಪಿಎಸ್​ಸಿ ಶುದ್ಧೀಕರಣ ಕೈಗೊಳ್ಳಲು ಅಡ್ಡಿಪಡಿಸುತ್ತಿರುವ ‘ಕೈ’ಗಳಾದರೂ ಯಾವವು?

ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ವ್ಯವಸ್ಥಿತ ಹಾಗೂ ಪಾರದರ್ಶಕ ಪರೀಕ್ಷಾ ವ್ಯವಸ್ಥೆ ರೂಪಿಸಲು ಸರ್ಕಾರ ಪ್ರಾಮಾಣಿಕ ಕ್ರಮ ಕೈಗೊಳ್ಳಬೇಕು. ಕೋಟ್ಯಂತರ ರೂ. ಖರ್ಚು ಮಾಡಿ ನಡೆಸುವ, ಸಾವಿರಾರು ಅಭ್ಯರ್ಥಿಗಳ ಭವಿಷ್ಯ ಅಡಗಿರುವ ಇಂತಹ ಪರೀಕ್ಷೆಗಳಲ್ಲಿ ಈ ರೀತಿಯ ಬೇಜವಾಬ್ದಾರಿತನ ಸಲ್ಲದು. ತಪ್ಪುಗಳು ಪದೇಪದೆ ಮರುಕಳಿಸದಂತೆ ಕೆಪಿಎಸ್​ಸಿ ಎಚ್ಚರ ವಹಿಸಬೇಕು. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಭ್ರಷ್ಟವ್ಯವಸ್ಥೆಯನ್ನು ಕೊನೆಗೊಳಿಸಬೇಕು. ಪರೀಕ್ಷೆಗಳ ನಿರ್ವಹಣೆಗೆ ದಕ್ಷ ಸಿಬ್ಬಂದಿಯನ್ನು ನೇಮಿಸಬೇಕು. ಕೆಪಿಎಸ್​ಸಿ ಸುಧಾರಣೆಯ ನಿಟ್ಟಿನಲ್ಲಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಪರೀಕ್ಷಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಬದ್ಧತೆ ತೋರಬೇಕು. ರಾಜಕೀಯ ಇಚ್ಛಾಶಕ್ತಿಯೂ ಈ ನಿಟ್ಟಿನಲ್ಲಿ ಮೆರೆಯಬೇಕು. ಒಟ್ಟಾರೆ ಕೆಪಿಎಸ್​ಸಿಯ ಪರಿಣಾಮಕಾರಿ ಶುದ್ಧೀಕರಣ ಮತ್ತು ಕಾಯಕಲ್ಪಕ್ಕೆ ಇದು ಸಕಾಲ.