ನ್ಯೂಸ್

ಮೂರನೇ ತರಗತಿಯ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಶಿಕ್ಷಕ!

ನವದೆಹಲಿ: ಮೂರನೇ ತರಗತಿಯ ಬಾಲಕಿ ಮೇಲೆ ಶಿಕ್ಷಕನೇ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ರಾಷ್ಟ್ರ ರಾಜಧಾನಿಯಲ್ಲೇ ನಡೆದಿದೆ. ಸರ್ಕಾರಿ ಶಾಲಾ ಶಿಕ್ಷಕನೇ ಈ ದುಷ್ಕೃತ್ಯ ನಡೆಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಸರ್ಕಾರಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕನಾಗಿರುವ ಈತ ಮೂರನೇ ತರಗತಿ ವಿದ್ಯಾರ್ಥಿನಿ, 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಪ್ರಕರಣ ಕಳೆದ ವಾರ ನಡೆದಿದ್ದು, ಬಾಲಕಿಯ ವರ್ತನೆಯಲ್ಲಿ ವ್ಯತ್ಯಾಸ ಕಂಡುಬಂದು ತಾಯಿ ವಿಚಾರಿಸಿದಾಗ ವಿಷಯ ಗೊತ್ತಾಗಿದೆ.

ಬಾಲಕಿ ಎಲ್ಲ ವಿಷಯ ಹೇಳಿದ ಮೇಲೆ ಆಕೆಯ ಪಾಲಕರು ಬುಧವಾರ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದಿದ್ದಾರೆ. ಬಾಲಕಿಗೆ ಕೌನ್ಸೆಲಿಂಗ್​ ನೀಡಿ ಚಿಕಿತ್ಸೆ ಒದಗಿಸಲಾಗಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಿಸಕೊಂಡು ತನಿಖೆ ಆರಂಭಿಸಲಾಗಿದೆ.