ಮಥುರಾ: ಆತ ಹನ್ನೆರಡನೆ ತರಗತಿ ವಿದ್ಯಾರ್ಥಿ. ವಯಸ್ಸು 17. ನಿನ್ನೆ ಆತನನ್ನು ಮತ್ತು ಆತನ ತಾಯಿಯನ್ನು ಪೊಲೀಸರು ಬಂಧಿಸಿದ್ರು. ತಂದೆಯನ್ನು ಕೊಲೆ ಮಾಡಿ, ಸಾಕ್ಷ್ಯ ನಾಶ ಮಾಡಿದ ಆರೋಪ ಈ ವಿದ್ಯಾರ್ಥಿ ಮೇಲಿದೆ. ಸಹಕಾರ ತಾಯಿಯದ್ದು. ಈ ಕಾರಣಕ್ಕೆ ಪೊಲೀಸರು ಅವರನ್ನು ಬಂಧಿಸಿದ್ರು. ತನಿಖೆ ವೇಳೆ ಬಹಿರಂಗವಾದುದು ಆಘಾತಕಾರಿ ವಿಚಾರ.
ಅಂದು ಮೇ 2. ಮನೋಜ್ ಮಿಶ್ರಾ (42) ಈ ಬಾಲಕನ ತಂದೆ. ಯಾವುದೋ ವಿಚಾರಕ್ಕೆ ಮಗನನ್ನು ಬೈದರು. ಸಿಟ್ಟಿಗೆದ್ದ ಮಗ ಕಬ್ಬಿಣದ ರಾಡ್ ಹಿಡಿದು ಅಪ್ಪನ ತಲೆಗೆ ಎರಡೇಟು ಹೊಡೆದಿದ್ದ. ಅಪ್ಪನ ಸಾವನ್ನು ಖಚಿತಪಡಿಸಿದ ನಂತರ ಮನೆಯ ಮೂಲೆಯೊಂದರಲ್ಲಿ ಶವವನ್ನು ಇರಿಸಿದ್ದ. ಅಂದೇ ರಾತ್ರಿ ತಾಯಿಯ ನೆರವಿನೊಂದಿಗೆ ಸ್ಕೂಟಿ ಮೇಲೆ ಆ ಶವವನ್ನು ಇರಿಸಿಕೊಂಡು ಐದು ಕಿ.ಮೀ. ದೂರದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಅಲ್ಲಿ ಪೆಟ್ರೋಲ್ ಮತ್ತು ಟಾಯ್ಲೆಟ್ ಕ್ಲೀನರ್ ಸುರಿದು ಬೆಂಕಿ ಹಚ್ಚಿ ಸಾಕ್ಷ್ಯ ಮುಖ ಗುರುತು ಸಿಗದಂತೆ ಮಾಡಿ ಬಂದಿದ್ದರು ಈ ಮಗ ಮತ್ತು ಅಮ್ಮ.
ಗುರುತು ಪತ್ತೆಯಾಗದ ಶವ ಮುಂದಿಟ್ಟುಕೊಂಡು ಪೊಲೀಸರು ಪ್ರಕರಣ ದಾಖಲಿಸಿದ್ದರು. ಯಾವುದೇ ನಾಪತ್ತೆ ಪ್ರಕರಣ ದಾಖಲಾಗದ ಕಾರಣ ಪ್ರಕರಣದ ಸುಳಿವು ಸಿಕ್ಕಿರಲಿಲ್ಲ. ಇತ್ತ ಮನೋಜ್ ಮಿಶ್ರಾ ನಾಪತ್ತೆಯಾದ ಬಗ್ಗೆ ಯಾರೂ ಏನು ವಿಚಾರಿಸಿರಲಿಲ್ಲ. ಕಾರಣ ಇಷ್ಟೆ- ಮನೋಜ್ ಮಿಶ್ರಾ ದಿನಗಟ್ಟಲೆ ಪ್ರವಾಸದಲ್ಲಿದ್ದು ಭಗವದ್ಗೀತೆ ಕಲಿಸುವ ಅಭಿಯಾನ ಕೈಗೊಳ್ಳುತ್ತಿದ್ದರು.
ಆದರೆ, ಇಸ್ಕಾನ್ ಪರವಾಗಿ ಮಿಶ್ರಾ ದೇಣಿಗೆ ಸಂಗ್ರಹದ ಕೆಲಸ ಮಾಡುತ್ತಿದ್ದ ಕಾರಣ, ಆರಂಭದಲ್ಲಿ ಒಂದೆರಡು ಬಾರಿ ವಿಚಾರಿಸಿದ್ದರು. ಬಳಿಕ ಭಗವದ್ಗೀತೆ ಅಭಿಯಾನ ನಡೆಸುತ್ತಿರಬಹುದು ಎಂದು ಸುಮ್ಮನಿದ್ದರು. ಮತ್ತೂ ಸುಳಿವೇ ಇಲ್ಲದ ಕಾರಣ ನಾಪತ್ತೆ ಪ್ರಕರಣ ದಾಖಲಿಸುವಂತೆ ಅಮ್ಮ-ಮಗನ ಮೇಲೆ ಒತ್ತಡ ಹೇರಿದ್ದರು. ಹಾಗೆ, ಅವರು ಮೇ 27ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ‘ಅಭಿನಂದನ್ ರಿಲೀಸ್ ಮಾಡದಿದ್ರೆ ಭಾರತ ದಾಳಿ ಮಾಡುತ್ತೆ ಅಂತ ನಡುಗ್ತಾ ಬೇಡಿಕೊಂಡಿದ್ರು ಬೆಜ್ವಾ, ಖುರೇಶಿ’ !
ಪೊಲೀಸರು ತನಿಖೆ ಶುರುಮಾಡಿದರು. ಅರಣ್ಯ ಪ್ರದೇಶದಲ್ಲಿ ಮೃತದೇಹದ ಬಳಿ ಸಿಕ್ಕ ಕನ್ನಡವನ್ನು ಇಸ್ಕಾನ್ ಸಹೋದ್ಯೋಗಿಗಳು ಗುರುತಿಸಿದರು. ಇದರ ಬೆನ್ನಿಗೆ ಅಮ್ಮ-ಮಗನ ಮೇಲೆ ಸಂದೇಹ ಮೂಡಿ ಮಗನನ್ನು ಹಲವು ಸುತ್ತಿನ ವಿಚಾರಣೆಗೆ ಒಳಪಡಿಸಿದರು. ಆಗ, ಸಾಕ್ಷ್ಯ ನಾಶ ಮಾಡುವುದಕ್ಕಾಗಿ 100ಕ್ಕೂ ಹೆಚ್ಚು ಬಾರಿ ಕ್ರೈಂ ಪ್ಯಾಟ್ರೋಲ್ ಸೀರಿಯಲ್ ವೀಕ್ಷಿಸಿದ್ದನ್ನು ಮಗ ಒಪ್ಪಿಕೊಂಡು ಕುಸಿದು ಕುಳಿತ. ಅಮ್ಮನೂ ತಲೆಬಾಗಿದಳು. ಹಾಗೆ, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಅಪ್ಪನ ಹತ್ಯೆಯಾಗಿ ದೂರ ಹೋದರೆ, ಅಮ್ಮ ಮತ್ತು ಸಹೋದರ ಅಪ್ಪನ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ ಕಾರಣ ಅನಾಥೆಯಾಗಿದ್ದು 11 ವರ್ಷದ ಬಾಲಕಿ. ಆಕೆಯನ್ನು ಅಜ್ಜ-ಅಜ್ಜಿಗೊಪ್ಪಿಸಿದ್ದಾರೆ ಪೊಲೀಸರು. (ಏಜೆನ್ಸೀಸ್)