Student : ಆನ್‌ಲೈನ್ ಗೇಮ್ ಮಾಯಾಜಾಲದ ಒಳಹೊಕ್ಕರೆ ಹೊರಬರುವುದು ಸುಲಭವಲ್ಲ. ಸ್ವಲ್ಪ ಯಾಮಾರಿದರೂ ಬದುಕೇ ನಾಶ. ಇದಕ್ಕೆ ಇತ್ತೀಚಿನ ಉದಾಹರಣೆ ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ನಡೆದ 10ನೇ ತರಗತಿ ವಿದ್ಯಾರ್ಥಿಯ ಸಾವು. ಈ ಘಟನೆ ಪ್ರತಿ ಕುಟುಂಬಕ್ಕೂ ಎಚ್ಚರಿಕೆ ಗಂಟೆ.
ಪಬ್‌ಜಿ ಎಂಬುದು ಜನಪ್ರಿಯ ಆನ್‌ಲೈನ್ ಗೇಮ್ ಎಂಬುದು ಎಲ್ಲರಿಗೂ ತಿಳಿದಿದೆ. ಈ ಗೇಮ್ಗೆ 10ನೇ ತರಗತಿ ವಿದ್ಯಾರ್ಥಿ ದಾಸನಾಗಿದ್ದ. ಇದನ್ನು ಮನಗಂಡ ಪಾಲಕರು ಮಗನಿಂದ ಫೋನ್ ಕಸಿದುಕೊಂಡರು. ಇದರಿಂದ ಮನನೊಂದ ಬಾಲಕ ಸಾವಿಗೆ ಶರಣಾಗಿದ್ದಾನೆ. ಈ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ನಡೆದಿದೆ.
ಸ್ಥಳೀಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಮೃತ ವಿದ್ಯಾರ್ಥಿಯನ್ನು ಬೇಟಿ ರಿಷೇಂದ್ರ ಎಂದು ಗುರುತಿಸಲಾಗಿದೆ. ಈತ ದಿನಕ್ಕೆ 10 ಗಂಟೆಗಳಿಗೂ ಹೆಚ್ಚು ಕಾಲ ಪಬ್‌ಜಿ ಆಡುತ್ತಿದ್ದ. ನಿರಂತರ ತರಗತಿಗಳಿಂದಾಗಿ 'ಪಬ್‌ಜಿ' ಆಡಲು ಸಾಕಷ್ಟು ಸಮಯ ಸಿಗುತ್ತಿಲ್ಲ ಅಂತ ಶಾಲೆಗೆ ಹೋಗಲು ಸಹ ನಿರಾಕರಿಸಿದ್ದ. ಮಗನ ಪಬ್‌ಜಿ ಗೇಮ್ ಚಟವನ್ನು ಮನಗಂಡ ಪಾಲಕರು, ಆತನನ್ನು ಮನೋವೈದ್ಯರು ಮತ್ತು ನರಶಸ್ತ್ರಚಿಕಿತ್ಸಕರ ಬಳಿ ಆಪ್ತ ಸಮಾಲೋಚನೆಗಾಗಿ ಕರೆದೊಯ್ದರೂ ಆತ ಅದನ್ನು ಧಿಕ್ಕರಿಸುತ್ತಲೇ ಇದ್ದನು. ಆಘಾತಕಾರಿ ಸಂಗತಿ ಏನೆಂದರೆ, ಆತ ವೈದ್ಯರಿಗೂ ಬೆದರಿಕೆ ಹಾಕಿದ್ದ.
ಮಗನ ವರ್ತನೆಯಿಂದ ಹತಾಶೆಗೊಂಡ ಪಾಲಕರು ಆತನಿಂದ ಮೊಬೈಲ್ ಫೋನ್ ಅನ್ನು ಕಸಿದುಕೊಂಡರು. ಎಷ್ಟೇ ಕೇಳಿದರೆ ಮತ್ತೆ ಮೊಬೈಲ್ ಕೊಡಲೇ ಇಲ್ಲ. ಪಬ್ಜಿಗೆ ತುಂಬಾ ದಾಸನಾಗಿದ್ದ ರಿಷೇಂದ್ರ, ಇನ್ಮುಂದೆ ಪಬ್‌ಜಿ ಆಡಲು ಸಾಧ್ಯವಾಗುವುದಿಲ್ಲ ಅಂತ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಇನ್ನು ಇತ್ತೀಚಿನ ದಿನಗಳಲ್ಲಿ 'PUBG' ವ್ಯಸನದ ಹಲವು ಪ್ರಕರಣಗಳು ವರದಿಯಾಗಿವೆ. ಈ ವರ್ಷದ ಆರಂಭದಲ್ಲಿ, ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ರೈಲು ಹಳಿಗಳ ಮೇಲೆ ಆಟ ಆಡುತ್ತಿದ್ದಾಗ ಮೂವರು ಹದಿಹರೆಯದವರು ರೈಲು ಡಿಕ್ಕಿಯಾಗಿ ಮೃತಪಟ್ಟರು. ಗೇಮ್ ಆಡುವಾಗ ಇಯರ್‌ಫೋನ್‌ಗಳನ್ನು ಧರಿಸಿದ್ದರು. ಇದರಿಂದ ರೈಲು ಬರುತ್ತಿರುವುದನ್ನು ಗಮನಿಸದ ಕಾರಣ ಅಪಘಾತ ಸಂಭವಿಸಿತ್ತು.
ಮತ್ತೊಂದು ಘಟನೆಯಲ್ಲಿ, ಹೈದರಾಬಾದ್‌ನಲ್ಲಿ ಕ್ಯಾಬ್ ಚಾಲಕನೊಬ್ಬ ವಾಹನ ಚಲಾಯಿಸುವಾಗ ತನ್ನ ಫೋನ್‌ನಲ್ಲಿ 'PUBG' ಆಡುತ್ತಿರುವುದನ್ನು ತೋರಿಸುವ ಕಳವಳಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಿಂದಿನ ಸೀಟಿನಲ್ಲಿದ್ದ ಪ್ರಯಾಣಿಕನೊಬ್ಬ ಸೆರೆಹಿಡಿದ ದೃಶ್ಯದಲ್ಲಿ, ಚಾಲಕ ಒಂದು ಕೈಯಿಂದ ವಾಹನ ಚಲಾಯಿಸುತ್ತಾ ಇನ್ನೊಂದು ಕೈಯಿಂದ ಫೋನ್ ಹಿಡಿದಿರುವುದನ್ನು ತೋರಿಸಲಾಗಿತ್ತು. ಕೆಲವೊಮ್ಮೆ, ಚಾಲಕ ಆಟವಾಡಲು ಎರಡೂ ಕೈಗಳನ್ನು ಬಳಸುತ್ತಿದ್ದನು ಮತ್ತು ರಸ್ತೆಯ ಮೇಲೆ ಗಮನವನ್ನು ಕೇಂದ್ರೀಕರಿಸಲು ಹೆಣಗಾಡುತ್ತಿದ್ದನು.
ಪಬ್ಜಿಯ ಮೂಲ ದಕ್ಷಿಣ ಕೊರಿಯಾ. ಇದಕ್ಕೆ ಹಣ ಹೂಡಿರುವುದು ಚೀನಾ. ಪಬ್ಜಿಯನ್ನು ಹಿಂಸೆಯ ಪ್ರಚೋದಕ ಎಂದು ಪರಿಗಣಿಸಿ ಅನೇಕ ರಾಷ್ಟ್ರಗಳು ಬ್ಯಾನ್ ಮಾಡಿವೆ. ದೇಶದ ಭದ್ರತಾ ದೃಷ್ಟಿಯಿಂದ 2020ರ ಸೆ. 2ರಂದೇ ಭಾರತದಲ್ಲಿ ಕೇಂದ್ರ ಸರ್ಕಾರ ಪಬ್ಜಿಯನ್ನು ನಿಷೇಧಿಸಿದೆ. ಅಂದಿನಿಂದ ಮರುಬಿಡುಗಡೆ ಬಗ್ಗೆ ಸರ್ಕಾರವಾಗಲಿ, ಪಬ್‌ಜಿ ಆಗಲಿ ಯಾವುದೇ ಹೇಳಿಕೆ ನೀಡಿಲ್ಲ. ಈಗಲೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಸೆಕ್ಷನ್ 69ಎ ಅಡಿ ಪಬ್‌ಜಿ ನಿಷೇಧವಾಗಿದೆ. ಆದಾಗ್ಯೂ ಕೆಲವು ತಾಂತ್ರಿಕ ದೋಷಗಳಿಂದಾಗಿ ಭಾರತದಲ್ಲಿ ಪಬ್‌ಜಿ ಚಾಲ್ತಿಯಲ್ಲಿದೆ! ಪಬ್‌ಜಿ ನಿಷೇಧಿತ ಸ್ಥಳವನ್ನೇ ಬದಲಾಯಿಸುವ ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (ವಿಪಿಎನ್) ಮೂಲಕ ಕೆಲವರು ಪಬ್‌ಜಿ ಆಡುತ್ತಿದ್ದಾರೆ.
ಆನ್‌ಲೈನ್ ಗೇಮಿಂಗ್ ಚಟವನ್ನು ಮಾನಸಿಕ ಅಸ್ವಸ್ಥತೆ ಎಂದು 2018ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕರೆದಿದೆ. ಇಂತಹ ಗೇಮ್ಳು ಅನೇಕರಲ್ಲಿ ಖಿನ್ನತೆ ಮೂಡಿಸುತ್ತವೆ. ಪಬ್‌ಜಿ ವ್ಯಸನಿಗಳು ಕಡಿಮೆ ಸಾಮಾಜಿಕ ಸಂವಹನದಿಂದಾಗಿ ಒತ್ತಡಕ್ಕೆ ಒಳಗಾಗಬಹುದು ಇಲ್ಲವೇ ಸಾರ್ವಜನಿಕವಾಗಿ ಆತಂಕದ ಸಮಸ್ಯೆಗಳನ್ನ ಎದುರಿಸ ಬಹುದು ಎಂದು ಹೇಳಿದೆ. (ಏಜೆನ್ಸೀಸ್)