ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ (BiggBoss) ಮುಗಿದು ಒಂದು ತಿಂಗಳು ಕಳೆದಿದ್ದು, ಅದಕ್ಕೆ ಪರ್ಯಾಯವಾಗಿ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಆರಂಭಿಸಲಾಗಿದೆ. ಇನ್ನೂ 11ನೇ ಆವೃತ್ತಿಯಲ್ಲಿ ತಮಾಷೆಯಾಗಿಯೇ ಜಗಳವಾಡಿ ಪ್ರೇಕ್ಷಕರಿಗೆ ಇಷ್ಟವಾಗಿದ್ದ ರಜತ್ ಹಾಗೂ ಚೈತ್ರಾ ಕುಂದಾಪುರ ಜೋಡಿ ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೆ ಬಾಯ್ಸ್ vs ಗರ್ಲ್ಸ್ ಶೋನಲ್ಲಿ ಮುಖಾಮುಖಿಯಾಗಿದ್ದು, ಇಲ್ಲೂ ಕೂಡ ತಮ್ಮ ಕಿತ್ತಾಟವನ್ನು ಮುಂದುವರೆಸಿದ್ದಾರೆ.
ಈ ಹಿಂದೆ ಬಿಗ್ಬಾಸ್ನಲ್ಲಿ ಕಿತ್ತಾಡಿಕೊಂಡಂತೆಯೇ ಬಾಯ್ಸ್ vs ಗರ್ಲ್ಸ್ ಶೋನಲ್ಲಿಯೂ ಜಗಳವಾಡಿಕೊಂಡಿದ್ದು, ಸದ್ಯ ಆ ಕುರಿತ ಪ್ರೋಮೋವೊಂದನ್ನು ಕಲರ್ಸ್ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ. ಚೈತ್ರಾ ಕೆರಳೋಕೆ ಕಾರಣವಾಗಿದ್ದು ರಜತ್ ಮಾತುಗಳೋ? ಸೋಲಿನ ಹತಾಶೆಯೋ? ಶೀರ್ಷಿಕೆಯಡಿ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಇವರಿಬ್ಬರ ನಡುವಿನ ಮಾತಿನ ಚಕಮಕಿಯನ್ನು ನೋಡಬಹುದಾಗಿದೆ.
ಬಿಗ್ ಬಾಸ್ ಶೋನಲ್ಲಿ ಪದೇಪದೇ ನನಗೆ ಚಾನ್ಸ್ ಕೊಡ್ತಾ ಇಲ್ಲ ಅಂತ ಹೇಳುತ್ತಲೇ ಇದ್ದರು. ಈಗ ಚಾನ್ಸ್ ಕೊಟ್ಟಿದ್ದೀವಿ.. ಆಡವ್ವಾ. ನಿನ್ನಿಂದ ಆಗಲ್ಲಮ್ಮ.. ನಮಗೆ ಗೊತ್ತಿದ್ದೇ ಸೆಲೆಕ್ಟ್ ಮಾಡಿರೋದು ಎಂದು ರಜತ್ ಹೇಳುತ್ತಾರೆ. ಈ ವೇಳೆ ಸಿಟ್ಟಿಗೆದ್ದು ಮೈಕ್ ಕಿತ್ತೆಸೆದ ಚೈತ್ರಾ ಕುಂದಾಪುರ ಎಲ್ಲದಕ್ಕೂ ಒಂದು ಲಿಮಿಟ್ ಅಂತ ಇರುತ್ತದೆ ರಜತ್.. ಎಲ್ಲದಕ್ಕೂ ಇನ್ನೊಬ್ಬರ ಮೇಲೆ ಹೊಣೆ ಹಾಕ್ತಾ ಇರೋದಲ್ಲ. ನಾನೇನು ಬಿಟ್ಟಿ ಬಿದ್ದಿದ್ದೀನಾ? ತುಂಬ ಸಲ ಕೆಳಗೆ ಹಾಕಿ ಮಾತಾಡ್ತಾ ಇದ್ದಾರೆ ಎಂದು ಚೈತ್ರಾ ರಜತ್ ಮೇಲೆ ಕೂಗಾಡಿದ್ದಾರೆ. ಈ ವೇಳೆ ಸಹ ಆಟಗಾರರು ಮಧ್ಯಪ್ರವೇಶಿಸಿದ್ದು ಅಂತಿಮವಾಗಿ ಏನಾಗಲಿದೆ ಎಂದು ಸಂಚಿಕೆ ಪ್ರಸಾರವಾದ ಬಳಿಕ ತಿಳಿಯಲಿದೆ.
ಬಿಗ್‌ಬಾಸ್ (BiggBoss) ಮನೆಯಲ್ಲಿ ಫೈರ್‌ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿದ್ದ ಚೈತ್ರಾ ಕುಂದಾಪುರ ತಮ್ಮ ಜೋರು ದನಿಯಿಂದಲೇ ಹೆಸರು ಮಾಡಿದ್ದರು. ಇತ್ತ ವೈಲ್ಡ್‌ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ರಜತ್ ಕೂಡ ಕಡಿಮೆಯೇನಿರಲಿಲ್ಲ. ಇಬ್ಬರೂ ಮಾತಿಗೆ ಮಾತು ಎನ್ನುತ್ತಾ ತೊಡೆ ತಟ್ಟಿ ಎಲ್ಲರಿಗೂ ಗಾಬರಿ ತರಿಸುತ್ತಿದ್ದರು. ಆದರೆ, ಫಿನಾಲೆಗೂ ಮುನ್ನವೇ ಚೈತ್ರಾ ಕುಂದಾಪುರ ಮನೆಯಿಂದ ಎಲಿಮಿನೇಟ್ ಆಗಿದ್ದರು.ಇದೀಗ ಈ ಇಬ್ಬರು ಸ್ಫರ್ಧಿಗಳು ಬಿಗ್ಬಾಸ್ನಿಂದ ಹೊರಬಂದ ಬಳಿಕ ಮತ್ತೊಮ್ಮೆ ಮುಖಾಮುಖಿಯಾಗಿದ್ದು, ಪ್ರೇಕ್ಷಕರಿಗೆ ಭರ್ಜರಿ ಮನರೋರಂಜನೆಯನ್ನು ನೀಡುತ್ತಿದ್ದಾರೆ.