

ನವದೆಹಲಿ: 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿಗೆ ಭರ್ಜರಿಯಾಗಿ ಸೇಡು ತೀರಿಸಿಕೊಂಡ ಭಾರತ ತಂಡ ಫೆಬ್ರವರಿ 23ರಂದು ನಡೆದ ಸೂಪರ್ ಸಂಡೇ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಬಡಿದಟ್ಟುವ ಮೂಲಕ ಹಾಲಿ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ (Champions Trophy) ಸೆಮಿಫೈನಲ್‌ನತ್ತ ದಾಪುಗಾಲಿಟ್ಟಿತು. ಮಾತ್ರವಲ್ಲ, ಪಾಕ್ ತಂಡವನ್ನು ನಿರ್ಗಮನದ ಬಾಗಿಲಿನತ್ತ ದೂಡಿತು. 8 ವರ್ಷದ ಕೆಳಗೆ ತಂಡದ ನಾಯಕರಾಗಿ ಫೈನಲ್‌ನಲ್ಲಿ ಮುಗ್ಗರಿಸಿದ್ದ ವಿರಾಟ್ ಕೊಹ್ಲಿ (Virat Kohli) ಭಾನುವಾರ 51ನೇ ಏಕದಿನ ಶತಕ ಬಾರಿಸುವ ಮೂಲಕ ಭಾರತದ ಗೆಲುವಿನ ರೂವಾರಿಯಾದರು.
ಆರ್ಥಿಕ ಬಿಕ್ಕಟ್ಟಿನಿಂದ ಕೆಂಗೆಟ್ಟಿರುವ ಪಾಕಿಸ್ತಾನವು 29 ವರ್ಷಗಳ ಬಳಿಕ ಐಸಿಸಿ ಟೂರ್ನಿಯೊಂದಕ್ಕೆ ಆತಿಥ್ಯ ವಹಿಸಿದ್ದು, ಭದ್ರತೆಯ ಕಾರಣ ನೀಡಿ ಭಾರತ ತಂಡ ಪಾಕ್ ಪ್ರವಾಸ ಮಾಡಲು ಭಾರತ ಹಿಂದೇಟು ಹಾಕಿತ್ತು. ಹೀಗಾಗಿ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದ್ದು, ಭಾರತವು ತನ್ನ ಪಾಲಿನ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದೆ. ಭಾರತ ತಂಡ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿರುವುದಕ್ಕೆ ಕೆಲವು ತಂಡದ ಆಟಗಾರರು ಅಪಸ್ವರ ತೆಗೆದಿದ್ದು, ಇದೀಗ ಪಾಕಿಸ್ತಾನ ತಂಡದ ಕೋಚ್ ಆಕಿಬ್ ಜಾವೇದ್ ಕೂಡ ಇದಕ್ಕೆ ಧ್ವನಿಗೂಡಿಸಿದ್ದು, ಒಂದೇ ಸ್ಟೇಡಿಯಂನಲ್ಲಿ ಆಡುವುದರಿಂದ ಆ ತಂಡಕ್ಕೆ ಹೆಚ್ಚು ಅನುಕೂಲವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ (Champions Trophy) ಪಂದ್ಯಕ್ಕೂ ಮುನ್ನ ಈ ಬಗ್ಗೆ ಮಾತನಾಡಿದ ಆಕಿಬ್ ಜಾವೇದ್, ಭಾರತ ತಂಡವು ದುಬೈ ಮೈದಾನದಲ್ಲೇ ಎಲ್ಲಾ ಪಂದ್ಯಗಳನ್ನು ಆಡುತ್ತಿರುವುದರಿಂದ ತಂಡಕ್ಕೆ ಹೆಚ್ಚು ಅನುಕೂಲವಾಗುತ್ತಿದೆ. ಭಾರತ ತಂಡವು ಒಂದೇ ಮೈದಾನದಲ್ಲಿ ಆಡುತ್ತಿದೆ, ಒಂದೇ ಹೋಟೆಲ್‌ನಲ್ಲಿ ಉಳಿದುಕೊಂಡಿದೆ. ಇದೊಂದೇ ಕಾರಣಕ್ಕೆ ಭಾರತ ಎದುರು ಪಾಕಿಸ್ತಾನ ಸೋಲು ಕಂಡಿತು ಎಂದು ಹೇಳಲಾರೆ. ತಂಡದಲ್ಲಿನ ಅನುಭವದ ಕೊರತೆಯಿಂದಾಗಿ ನಾವು ಭಾರತದ ವಿರುದ್ಧ ಸೋಲು ಕಂಡೆವು. ನಾವು ಅಲ್ಲಿ ಹೋಗುವ ಮುನ್ನ ಅವರು 10 ಪಂದ್ಯಗಳನ್ನು ಆಡಿದ್ದೆವು ಎಂದು ಪಾಕಿಸ್ತಾನದ ಕೋಚ್ ಆಕಿಬ್ ಜಾವೇದ್ ಹೇಳಿದ್ದಾರೆ.
2025 ರ ಚಾಂಪಿಯನ್ಸ್ ಟ್ರೋಫಿಯ (Champions Trophy) ಸೆಮಿಫೈನಲ್ ಸ್ಪರ್ಧೆಯಲ್ಲಿ ಉಳಿಯಲು ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದ ಫಲಿತಾಂಶ ಬಾಂಗ್ಲಾದೇಶದ ಪರವಾಗಿ ಬರಬೇಕಿತ್ತು. ಆದರೆ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸುವ ಮೂಲಕ ಪಾಕಿಸ್ತಾನದ ಭರವಸೆಯನ್ನು ಹುಸಿಗೊಳಿಸಿತು. ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ನಿರೀಕ್ಷೆಯೊಂದಿಗೆ ಈ ಟೂರ್ನಿಗೆ ಆತಿಥ್ಯವಹಿಸಿದ್ದ ಪಾಕಿಸ್ತಾನ ತಂಡಕ್ಕೆ ಇದು ದೊಡ್ಡ ಹಿನ್ನಡೆಯಾಗಿದ್ದು, ಭಾರೀ ಮುಖಭಂಗವನ್ನುಂಟು ಮಾಡಿದೆ.
ಪಾಕಿಸ್ತಾನದ ಜೊತೆಗೆ ಬಾಂಗ್ಲಾದೇಶ ತಂಡವೂ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಈ ಎರಡೂ ತಂಡಗಳು ಈ ಟೂರ್ನಿಯಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನ್ನು ಅನುಭವಿಸಿದರೆ, ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲು ಕಂಡಿತು. ಮತ್ತೊಂದೆಡೆ, ಬಾಂಗ್ಲಾದೇಶ ತಂಡವು ನ್ಯೂಜಿಲೆಂಡ್‌ಗಿಂತ ಮೊದಲು ಭಾರತ ತಂಡದ (Team India) ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದ್ದು, ಈ ಎರಡೂ ತಂಡಗಳು ಗುಂಪು ಹಂತದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಪರಸ್ಪರ ವಿರುದ್ಧ ಆಡಲಿವೆ. ಇದು ಪಾಯಿಂಟ್ ಟೇಬಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.