ತಿರುಪತಿ: ತಿರುಪತಿಯ ಪೊಲೀಸ್ ಟ್ರೈನಿಂಗ್ ಸೆಂಟರ್ನಲ್ಲಿ ಭಾನುವಾರ ಅದೊಂದು ವಿಶೇಷ ದೃಶ್ಯ. ಯುವ ಮಹಿಳಾ ಪೊಲೀಸ್ ಅಧಿಕಾರಿಗೆ ಅವರ ತಂದೆಯೇ ಸಲ್ಯೂಟ್ ಮಾಡಿದ ಭಾವನಾತ್ಮಕ ಕ್ಷಣ! ಹೌದು, ಇದು ಮಗಳ ಯಶಸ್ಸು ಕಂಡು ಸಂತೋಷ ಪಟ್ಟ ತಂದೆಯೊಬ್ಬರ ಕತೆ!
ತಿರುಪತಿಯ ಪೊಲೀಸ್ ಟ್ರೈನಿಂಗ್ ಸೆಂಟರ್ನಲ್ಲಿ ಆಂಧ್ರಪ್ರದೇಶದ ಪೊಲೀಸ್ ಡ್ಯೂಟಿ ಮೀಟ್ ನಡೆಯುತ್ತಿದೆ. ಅದರ ಪೂರ್ವಸಿದ್ಧತೆಯಲ್ಲಿ ಭಾಗವಹಿಸಿದ್ದ ಗುಂಟೂರು ನಗರ ದಕ್ಷಿಣ ಡಿವೈಎಸ್ಪಿ ಜೆಸ್ಸಿ ಪ್ರಶಾಂತಿ, ದಿಶಾ ಕಾಯ್ದೆ ಅಡಿಯ ಕರ್ತವ್ಯಪಾಲನೆಯ ಪರಿವೀಕ್ಷಣೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಅವರು ಡ್ಯೂಟಿ ಮೀಟ್ನ ರಿಹರ್ಸಲ್ನಲ್ಲಿ ಭಾಗವಹಿಸುತ್ತಿದ್ದ ತಂದೆ ಶಾಂ ಸುಂದರ್ರನ್ನು ಎದುರುಗೊಂಡರು.
ತಮಗಿಂತ ಉನ್ನತ ಹುದ್ದೆಯನ್ನು ಪಡೆದು ರಾಂಕ್ ಆಫೀಸರ್ ಆಗಿರುವ ಮಗಳನ್ನು ನೋಡಿದಾಕ್ಷಣ ಹೆಮ್ಮೆ ಉಂಟಾಗಿ ತಂದೆ ಸರ್ಕಲ್ ಇನ್ಸ್ಪೆಕ್ಟರ್ ಶಾಂ ಸುಂದರ್ ಸಲ್ಯೂಟ್ ಮಾಡಿದರು. ಡಿವೈಎಸ್ಟಿ ಜೆಸ್ಸಿ ಪ್ರಶಾಂತಿ ಸಹ ಅವರ ತಂದೆಗೆ ಮರುಸಲ್ಯೂಟ್ ಮಾಡಿದರು. ಅಷ್ಟೇ ಅಲ್ಲ, ಶಾಂ ಸುಂದರ್ ತಮ್ಮ ಮಗಳಿಗೆ ಶುಭ ಕೋರಿ, ಮಗಳು ಇಲಾಖೆಯಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಾಳೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದರು.
ಇದನ್ನೂ ಓದಿ: ಯಡಿಯೂರಪ್ಪ ಹುಚ್ಚಾಸ್ಪತ್ರೆಯಲ್ಲಿ ಇರಬೇಕಿತ್ತು ಆದರೆ ವಿಧಾನಸೌಧವನ್ನೇ ಹುಚ್ಚಾಸ್ಪತ್ರೆ ಮಾಡಿಕೊಂಡಿದ್ದಾರೆ ಎಂದ ವಾಟಾಳ್!
ಇವೆಲ್ಲವನ್ನೂ ನೋಡುತ್ತಿದ್ದ ಇತರ ಪೊಲೀಸ್ ಸಿಬ್ಬಂದಿಯ ಮುಖ ಕೂಡ ಅರಳಿತು. ತಿರುಪತಿ ನಗರ ಎಸ್ಪಿ ಅವುಲ ರಮೇಶ್ ರೆಡ್ಡಿ ತಂದೆ-ಮಗಳಿಬ್ಬರನ್ನೂ ಪ್ರಶಂಸಿಸಿದರು. ಸೋಮವಾರದಿಂದ ನಾಲ್ಕು ದಿನಗಳ ಕಾಲ ಇಗ್ನೈಟ್-2021 ಹೆಸರಲ್ಲಿ ಮೊದಲ ಎಪಿ ಪೊಲೀಸ್ ಡ್ಯೂಟಿ ಮೀಟ್ ಆಯೋಜಿತವಾಗಿದೆ. 40 ಐಪಿಎಸ್ ಅಧಿಕಾರಿಗಳೂ ಸೇರಿದಂತೆ ಒಟ್ಟು 1,500 ಪೊಲೀಸ್ ಸಿಬ್ಬಂದಿ ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.