ಶಿಮ್ಲಾ: ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸುಖು ಅವರಿಗೆ ತರಲಾಗಿದ್ದ ಸಮೋಸಾ ಹಾಗೂ ಕೇಕ್‌ಗಳನ್ನು (Cake-Samosa) ಅವರ ಭದ್ರತಾ ಸಿಬ್ಬಂದಿಗೆ ಸರ್ವ್ ಮಾಡಲಾಗಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಕಾಂಗ್ರೆಸ್ ಸರ್ಕಾರ ಆದೇಶಿಸಿದ್ದು, ಈ ವಿಚಾರ ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ಮುಖ್ಯಮಂತ್ರಿಗೆ ತಂದಿದ್ದ ಸಮೋಸವನ್ನು ಭದ್ರತಾ ಸಿಬ್ಬಂದಿಗೆ ನೀಡಿರುವುದು ಈಗ ಸಿಐಡಿ (CID) ತನಿಖೆವರೆಗೂ ಹೋಗಿದೆ. ಸಿಐಡಿ ಕೂಡ ಈ ಘಟನೆಯನ್ನು ಸರ್ಕಾರಿ ವಿರೋಧಿ ಕೃತ್ಯ ಎಂದು ಹೇಳುವ ಮೂಲಕ ಮತ್ತಷ್ಟು ಅಚ್ಚರಿ ಮೂಡಿಸಿದ್ದು, ಈ ವಿಚಾರವಾಗಿ ಬಿಜೆಪಿ ವಾಗ್ದಾಳಿ ನಡೆಸಿದೆ.
ಅಕ್ಟೋಬರ್ 21 ರಂದು ಸಿಐಡಿ ಕೇಂದ್ರ ಕಚೇರಿಗೆ ಕಾರ್ಯಕ್ರಮಕ್ಕಾಗಿ ತೆರಳಿದ್ದ ಮುಖ್ಯಮಂತ್ರಿಗೆ ನೀಡಲು ಲಕ್ಕರ್ ಬಜಾರ್‌ನ ರಾಡಿಸನ್ ಬ್ಲೂ ಹೋಟೆಲ್‌ನಿಂದ ಮೂರು ಬಾಕ್ಸ್‌ಗಳಲ್ಲಿ ಸಮೋಸ ಮತ್ತು ಕೇಕ್‌ಗಳನ್ನು (Cake-Samosa) ತರಿಸಲಾಗಿತ್ತು. ಆದರೆ ಸಿಎಂಗೆ ನೀಡುವ ಬದಲು ಅದನ್ನು ಅವರ ಭದ್ರತಾ ಸಿಬ್ಬಂದಿಗೆ ನೀಡಲಾಗಿತ್ತು. ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧಿ ಸಿಐಡಿ ತನಿಖೆಯನ್ನು ನಡೆಸಲಾಗಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿ ಪ್ರತಿಕ್ರಿಯಿಸಿದ್ದು, ಪೊಲೀಸರು ಸಣ್ಣಪುಟ್ಟ ವಿಷಯಗಳಿಗೆ ತಮ್ಮ ಸಮಯವನ್ನು ಹಾಳು ಮಾಡುವ ಬದಲು ಸಿಎಂ ಕಚೇರಿಯಿಂದ ಸೆಕ್ರೆಟರಿಯೇಟ್‌ವರೆಗಿನ ಹಲವು ಹಗರಣಗಳ ಬಗ್ಗೆ ಮೊದಲು ಗಮನಹರಿಸಬೇಕಿದೆ. ಈ ಸರ್ಕಾರವು ಸಾರ್ವಜನಿಕರ ಸಮಸ್ಯೆಗಳಿಗಿಂತ ಸಮೋಸವನ್ನು ಹೇಗೆ ನೀಡಲಾಗುತ್ತಿದೆ ಎಂಬುದರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತದೆ ಎಂದು ಕಿಡಿಕಾರಿದ್ದಾರೆ.