ನ್ಯೂಸ್

ಹುಡುಗಿಯರ ನೆಚ್ಚಿನ 'ಸಿಐಡಿ' ಇನ್ಸ್​ಪೆಕ್ಟರ್ ಇಂದು ಬೆಂಗಳೂರಿನಲ್ಲಿ ಪ್ರೊಫೆಸರ್!

ನವದೆಹಲಿ: 1998ರಲ್ಲಿ ಪ್ರಾರಂಭಗೊಂಡು ಮೆಚ್ಚುಗೆ ಪಡೆದಿದ್ದ ಸಿಐಡಿ ಧಾರಾವಾಹಿ ಬಹುತೇಕ ಮಂದಿಗೆ ನೆನಪಿರುತ್ತದೆ. ಸಸ್ಪೆನ್ಸ್ ಮತ್ತು ಥ್ರಿಲ್ಲರ್​ ಕಥೆಗಳಿಂದ ಒಳಗೊಂಡಿದ್ದ ಈ ಧಾರಾವಾಹಿ ಮರುಪ್ರಸಾರವಾದರೆ ಇಂದಿಗೂ ಟಿ.ವಿ ಮುಂದೆ ಕುಳಿತೊಳ್ಳುವ ಹಲವು ಮಂದಿ ಇದ್ದಾರೆ. ಅವರಿಗೆಲ್ಲ ಸಿಐಡಿ ಧಾರಾವಾಹಿಯ ಪ್ರತಿಯೊಬ್ಬ ಕಲಾವಿದರು ಸದಾ ನೆನಪಿರುತ್ತಾರೆ. ಆದರೆ ತಮ್ಮ ನೆಚ್ಚಿನ ಧಾರಾವಾಹಿ ನಟರೆಲ್ಲ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಕುತೂಹಲ ಇರುವುದು ಸಹಜ.

ಸಿಐಡಿ ಧಾರಾವಾಹಿ ಪ್ರಸಾರ ಸ್ಥಗಿತಗೊಂಡು ಕೆಲ ವರ್ಷಗಳೇ ಕಳೆದಿವೆ. ಆದರೆ ಅದರ ಪಾತ್ರಧಾರಿಗಳನ್ನು ಮಾತ್ರ ಜನರು ಇಂದಿಗೂ ಮರೆತಿಲ್ಲ. ಪ್ರತಿಯೊಬ್ಬ ಕಲಾವಿದರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಸಿಐಡಿ ಧಾರಾವಾಹಿ ಕಲಾವಿದರೊಬ್ಬರು ಬೆಂಗಳೂರಿನ ಕಾಲೇಜೊಂದರಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ನಟನೆ ಬಿಟ್ಟು ಪ್ರೊಫೆಸರ್ ಆದ ನಟ!

ಸಿಐಡಿ ಧಾರಾವಾಹಿಯಲ್ಲಿ ಇನ್ಸ್‌ಪೆಕ್ಟರ್ ಪಾತ್ರ ನಿರ್ವಹಿಸಿದ್ದ ನಟ ವಿವೇಕ್ ಮಶ್ರೂ ನೆನಪಿರಬಹುದು! ಅವರೀಗ ಬೆಂಗಳೂರಿನ ಸಿಎಂಆರ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬಗ್ಗೆ ಇನ್ನಷ್ಟು ಮಾಹಿತಿ ಹುಡುಕಲು ಆರಂಭಿಸಿದ್ದಾರೆ.

ಈ ವೇಳೆ ವಿವೇಕ್ ಮಶ್ರೂ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಸಿಕ್ಕಿದೆ. ಅಲ್ಲಿ ಪರಿಶೀಲಿಸಿದಾಗ ಬೆಂಗಳೂರಿನಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ. ಅವರಿಲ್ಲಿ ಕಾಮನ್ ಕೋರ್ ಪಠ್ಯಕ್ರಮದ (ಡಿಸಿಸಿಸಿ) ನಿರ್ದೇಶಕರಾಗಿದ್ದಾರೆ. ಇದಕ್ಕೂ ಮುನ್ನ ಇಂಡಸ್ ವ್ಯಾಲಿ ಶಾಲೆಯ ಮಾರುಕಟ್ಟೆ ನಿರ್ದೇಶಕರೂ ಆಗಿದ್ದರು.

ನಿಮ್ಮೆಲ್ಲರ ಪ್ರೀತಿ ಹೀಗೇ ಇರಲಿ...

ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದಂತೆ ವಿವೇಕ್ ಮಶ್ರು ಟ್ವೀಟ್‌ ಒಂದನ್ನು ಮರುಟ್ವೀಟ್ ಮಾಡಿದ್ದಾರೆ. 'ನಾನು ಮಾಡಿದ ಯಾವುದೋ ಸಣ್ಣ ಕೆಲಸ ನಿಮ್ಮೆಲ್ಲರ ನಿಮ್ಮ ದಯೆ, ಪ್ರೀತಿ, ಮೆಚ್ಚುಗೆಗೆ ಕಾರಣವಾಗಿದೆ. ಎಲ್ಲರಿಗೂ ಅನಂತ ಕೃತಜ್ಞತೆ. ನಿಮ್ಮೆಲ್ಲರ ಪ್ರೀತಿ ಹೀಗೇ ಇರಲಿ' ಎಂದು ಪ್ರತಿಕ್ರಿಯಿಸಿದ್ದಾರೆ.