ನ್ಯೂಸ್

ಎಲ್​ಜೆಪಿಯಲ್ಲಿ ಚಿರಾಗ್​ ಒಬ್ಬಂಟಿ! ಅಧ್ಯಕ್ಷ ಸ್ಥಾನದಿಂದ ಕಿಕ್​ಔಟ್!

ಪಟನಾ: ಲೋಕ ಜನಶಕ್ತಿ ಪಕ್ಷ (ಎಲ್​ಜೆಪಿ)ದ ಅಧ್ಯಕ್ಷ ಸ್ಥಾನದಲ್ಲಿದ್ದ ಚಿರಾಗ್​ ಪಾಸ್ವಾನ್​ ಅವರನ್ನು ಅವರದ್ದೇ ಪಕ್ಷದ ಬಂಡಾಯ ಸಂಸದರು ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿದ್ದಾರೆ. ಒನ್ ಮ್ಯಾನ್ ಒನ್​ ಪೋಸ್ಟ್ ಇರಬೇಕೆಂಬ ಪ್ರಿನ್ಸಿಪಲ್​ ಆಧಾರದಲ್ಲಿ ಈ ರೀತಿಯ ತೀರ್ಮಾನ ತೆಗೆದುಕೊಂಡಿರುವುದಾಗಿ ಸಂಸದರು ಹೇಳಿದ್ದಾರೆ.

ಸದ್ಯ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದ್ದು, ಸದ್ಯದಲ್ಲೇ ಎಲ್​ಜೆಪಿ ಸಂಸದೀಯ ಮಂಡಳಿಯ ನಾಯಕ ಸ್ಥಾನದಿಂದಲೂ ತೆಗೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಸದ್ಯದಲ್ಲೇ ಪಕ್ಷದ ರಾಷ್ಟ್ರೀಯ ಕಾಮಕಾರಿ ಸಭೆ ನಡೆಯಲಿದ್ದು, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಅಲ್ಲಿಯವರೆಗೆ ಸೂರಜ್​ ಭನ್​ ಅವರನ್ನು ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸುವುದಾಗಿ ಹೇಳಲಾಗಿದೆ.

ಎಲ್​ಜೆಪಿಯಲ್ಲಿ ಸೋಮವಾರ ಇದ್ದಕ್ಕಿದ್ದಂತೆ ದಿಢೀರ್​ ಬೆಳವಣಿಗೆಯಾಗಿದ್ದು, ಐವರು ಸಂಸದರು ಬಂಡೆದ್ದಿದ್ದಾರೆ. ಚಿರಾಗ್ ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಾಸ್ ಅವರನ್ನು ಸಂಸದೀಯ ಪಕ್ಷದ ನೂತನ ನಾಯಕ ಎಂದು ಘೋಷಿಸಿಬಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿರಾಗ್, "ನನ್ನ ತಂದೆ ಕಟ್ಟಿದ ಪಕ್ಷವನ್ನು ಒಟ್ಟಿಗೆ ಇಟ್ಟುಕೊಳ್ಳಲು ಪ್ರಯತ್ನಿಸಿದೆವು ಆದರೆ ಅದು ವಿಫಲವಾಗಿದೆ." ಎಂದು ಟ್ವೀಟ್​ ಮೂಲಕ ಹೇಳಿದ್ದಾರೆ. (ಏಜೆನ್ಸೀಸ್)