ನವದೆಹಲಿ: ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿ ಹಿಂಸಾತ್ಮಕ ಘರ್ಷಣೆ ನಡೆಸಿದ ಚೀನಾ ಈಗ ಭೂತಾನ್ ಜತೆಗೂ ಗಡಿ ತಂಟೆ ಶುರು ಮಾಡಿದೆ.
ಚೀನಾದ ಈ ತಂಟೆಗೆ ಭೂತಾನ್ ಭಾರಿ ಪ್ರತಿರೋಧ ತೋರಿದೆ. ಭೂತಾನ್ನ ತ್ರಾಶಿಗಾಂಗ್ ಜಿಲ್ಲೆಯಲ್ಲಿರುವ ವನ್ಯಜೀವಿ ಅಭಯಾರಣ್ಯಕ್ಕೆ ಗ್ಲೋಬಲ್ ಎನ್ವಿರಾನ್ಮೆಂಟ್ ಪ್ಯಾಸಿಲಿಟಿಯಿಂದ ನೀಡಲಾಗುತ್ತಿದ್ದ ಅನುದಾನ ತಡೆಗೆ ಚೀನಾದ ಪ್ರತಿನಿಧಿಯ ಯತ್ನವನ್ನು ಭೂತಾನ್ ವಿರೋಧಿಸಿದೆ.
ಇದನ್ನೂ ಓದಿ; ಪಾಕಿಸ್ತಾನದಿಂದ ನಮಗೆ ಮುಕ್ತಿ ಬೇಕು; ಪಾಕ್ ಆಕ್ರಮಿತ ನೆಲದಲ್ಲಿ ಮೊಳಗಿದೆ ಬಂಡಾಯದ ಕಹಳೆ
ಜಿಇಎಫ್ ಅನುದಾನ ಪಡೆಯುತ್ತಿರುವ ಅಭಯಾರಣ್ಯ ಚೀನಾ ಹಾಗೂ ಭೂತಾನ್ ಗಡಿಯಲ್ಲಿದೆ ಹಾಗೂ ಅದು ವಿವಾದದಲ್ಲಿದೆ. ಚೀನಾ-ಭೂತಾನ್ ನಡುವಿನ ಪ್ರಸ್ತಾಪಿತ ಮಾತುಕತೆಯಲ್ಲಿಯೂ ಇದರ ಬಗ್ಗೆ ಚರ್ಚೆಯಾಗಲಿದೆ ಎಂದು ಜಿಇಎಫ್ ಜತೆಗಿನ ವರ್ಚುವಲ್ ಮೀಟಿಂಗ್ನಲ್ಲಿ ಚೀನಾ ಪ್ರತಿನಿಧಿ ಹೇಳಿದ್ದಾರೆ.
ಹೀಗಾಗಿ ಅಭಯಾರಣ್ಯದ ಹೆಸರಿನಲ್ಲಿ ಭೂತಾನ್ಗೆ ಅನುದಾನ ನೀಡುವುದನ್ನು ಚೀನಾ ವಿರೋಧಿಸಿದೆ. 1984ರಿಂದಲೂ ಚೀನಾ ಜತೆಗಿನ ಗಡಿ ವಿವಾದವನ್ನು ಬಗೆ ಹರಿಸಿಕೊಳ್ಳಲು ಭೂತಾನ್ ಮಾತುಕತೆ ನಡೆಸುತ್ತಲೇ ಇದೆ.
ಒಟ್ಟಾರೆ 764 ಕಿಮೀ ಗಡಿ ವಿವಾದದಲ್ಲಿದೆ. ಆದರೆ, ಈವರೆಗೆ ಚೀನಾ ಸಕ್ಟೆಂಗ್ ಅಭಯಾರಣ್ಯದ ಮೇಲೆ ಅಥವಾ ಉತ್ತರ ಭೂತಾನ್ನ ಇತರ ಪ್ರದೇಶಗಳ ತನ್ನ ಹಕ್ಕನ್ನು ಮಂಡಿಸಿರಲಿಲ್ಲ.
ಸಕ್ಟೆಂಗ್ ಅಭಯಾರಣ್ಯ ಭೂತಾನ್ನ ಅವಿಭಾಜ್ಯ ಹಾಗೂ ಸಾರ್ವಭೌಮ ಪ್ರದೇಶವಾಗಿದೆ ಎಂದು ಭೂತಾನ್ ಜಿಇಎಫ್ ಸಭೆಯಲ್ಲಿ ವಾದ ಮಂಡಿಸಿದೆ. ಚೀನಾ ಇದನ್ನು ವಿವಾದಿತ ಪ್ರದೇಶ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದೆ.