ಬೀಜಿಂಗ್: ಕೋವಿಡ್ ಮೂಲಕ ಇಡೀ ಜಗತ್ತಿನಲ್ಲಿ ವಿನಾಶವನ್ನು ಉಂಟು ಮಾಡಿದ್ದ ಚೀನಾದಲ್ಲಿ ಇದೀಗ ಹೊಸ ಪ್ರಭೇದದ ವೈರಸ್ (Virus) ಪತ್ತೆಯಾಗಿದ್ದು, ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಎಂಬ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ವಿಶ್ವದಾದ್ಯಂತ ಮತ್ತೊಮ್ಮೆ ಹೆಲ್ತ್ ಎಮರ್ಜೆನ್ಸಿ ಸೃಷ್ಟಿಯಾಗಲಿದೆಯಾ ಎಂಬ ಆತಂಕ ಕಾಡಲು ಶುರುವಾಗಿದೆ.
ಈ ಬಗ್ಗೆ ಅಧಿಕೃತ ಘೋಷಣೆಯಾಗಿಲ್ಲವಾದರೂ ಚೀನಾದಲ್ಲಿ ರೋಗಿಗಳಿಂದ ಆಸ್ಪತ್ರೆಗಳು ಹಾಗೂ ಸ್ಮಶಾನ ಸ್ಥಳಗಳೂ ಭರ್ತಿಯಾಗಿವೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಪೋಸ್ಟ್ಗಳಿಗೆ ಯಾವುದೇ ಆಧಾರವಿಲ್ಲ. ಈ ಹೊಸ ವೈರಸ್ (Virus) ಬಗ್ಗೆ ಚೀನಾ ಯಾವುದೇ ಸ್ಪಷ್ಟನೆ ನೀಡಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯೂ ಈ ಬಗ್ಗೆ ಏನನ್ನೂ ಹೇಳಿಲ್ಲ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್ಗಳನ್ನು ನೋಡುವುದಾದರೆ HMPV, ಇನ್ಫ್ಲುಯೆನ್ಸ A, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು Covid-19 ಸೇರಿದಂತೆ ಅನೇಕ ವೈರಸ್‌ಗಳು (Virus) ಚೀನಾದಲ್ಲಿ ಏಕಕಾಲದಲ್ಲಿ ಹರಡುತ್ತಿವೆ ಎಂದು ಪೋಸ್ಟ್ಗಳನ್ನು ಹಂಚಿಕೊಳ್ಳಲಾಗಿದ್ದು, ಇಲ್ಲಿಯವರೆಗೆ, 7,834 ಕಾಯಿಲೆಗಳು ಮತ್ತು 170 ಸಾವುನೋವುಗಳನ್ನು ದಾಖಲಿಸಲಾಗಿದೆ, ಇವೆಲ್ಲವೂ ಚೀನಾದಲ್ಲಿ ಸಂಭವಿಸಿವೆ ಎಂದು ಪೋಸ್ಟ್ ಮಾಡಲಾಗಿದೆ.
ಎನ್ಡಿಟಿವಿಯಲ್ಲಿ ಪ್ರಕಟವಾಗಿರುವ ವರದಿ ನೋಡುವುದಾದರೆ, ಚೀನಾ ಪ್ರಸ್ತುತ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ನಿಂದ (Virus) ಸಂಪೂರ್ಣವಾಗಿ ತತ್ತರಿಸಿದೆ. HMPVಯಲ್ಲಿ ಜ್ವರ ತರಹದ ಲಕ್ಷಣಗಳು ಕಂಡುಬರುತ್ತವೆ. ಇದರ ರೋಗಲಕ್ಷಣಗಳು ಸಹ ಕೋವಿಡ್ -19 ಅನ್ನು ಹೋಲುತ್ತವೆ. ಸದ್ಯ ಚೀನಾದಲ್ಲಿ ಏನಾಗುತ್ತಿದೆ ಎಂದು ಅವರ ಆರೋಗ್ಯ ಇಲಾಖೆಗೆ ಅರ್ಥವಾಗುತ್ತಿಲ್ಲ. ಹೀಗಾಗಿ ಆರೋಗ್ಯಾಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದಾರೆ ಎಂದು ತಿಳಿಸಲಾಗಿದೆ.
ಇದು ನ್ಯುಮೊವಿರಿಡೆ ಕುಟುಂಬದ ಮೆಟಾಪ್ನ್ಯೂಮೋ ವೈರಸ್ (Virus) ವರ್ಗಕ್ಕೆ ಸೇರಿದೆ. ಇದನ್ನು ಮೊದಲು 2001 ರಲ್ಲಿ ಡಚ್ ಸಂಶೋಧಕರು ಕಂಡುಹಿಡಿದರು. ಸಂಶೋಧಕರು ಉಸಿರಾಟದ ಸೋಂಕಿನಿಂದ ಬಳಲುತ್ತಿರುವ ಮಕ್ಕಳ ಮಾದರಿಗಳನ್ನು ಅಧ್ಯಯನ ಮಾಡುವಾಗ ಈ ವೈರಸ್ ಬಹಿರಂಗವಾಯಿತು. ಈ ವೈರಸ್ ಕನಿಷ್ಠ ಆರು ದಶಕಗಳಿಂದ ಅಸ್ತಿತ್ವದಲ್ಲಿದೆ ಎಂದು ಅಧ್ಯಯನಗಳು ತೋರಿಸಿವೆ.
ಇದು ಸಾಮಾನ್ಯ ಉಸಿರಾಟದ ರೋಗಕಾರಕವಾಗಿ ಪ್ರಪಂಚದಾದ್ಯಂತ ಹರಡಿದೆ. ಇದು ಮುಖ್ಯವಾಗಿ ಕೆಮ್ಮುವಿಕೆ ಮತ್ತು ಸೀನುವಿಕೆಯಿಂದ ಉತ್ಪತ್ತಿಯಾಗುವ ಹನಿಗಳ ಮೂಲಕ ಹರಡುತ್ತದೆ. ವೈರಸ್‌ನ ಸೋಂಕಿನ ಅವಧಿ ಮೂರರಿಂದ ಐದು ದಿನಗಳು. ಇದು ವರ್ಷವಿಡೀ ಕಂಡುಬರಬಹುದಾದರೂ, ಚಳಿಗಾಲದಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.