ಬಳ್ಳಾರಿ: ರೈತ ಬೆಳೆದ ಮೆಣಸಿನಕಾಯಿ ಫಸಲನ್ನು ಹೊತ್ತೊಯ್ಯುತ್ತಿದ್ದ ಲಾರಿಗೆ ವಿದ್ಯುತ್ ತಂತಿ ಸ್ಪರ್ಶಿಸಿದ ಹಿನ್ನೆಲೆ ಲಾರಿ ಬೆಂಕಿಯ ಕೆನ್ನಾಲಿಗೆಗೆ ತುತ್ತಾದ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಸಿದ್ದಮನಹಳ್ಳಿ ಹೊರವಲಯದಲ್ಲಿ ವರದಿಯಾಗಿದೆ.
ವಿದ್ಯುತ್ ತಂತಿ ತಗುಲಿ ಸಂಪೂರ್ಣ ಲಾರಿ ಸುಟ್ಟು ಕರಕಲಾಗಿದೆ. ರೈತರು ಬೆಳೆದ ಮೆಣಸಿನಕಾಯಿ ತೆಗೆದುಕೊಂಡು ಹೋಗುತ್ತಿದ್ದ ಮೆಣಸಿನಕಾಯಿ ಲಾರಿಯು ಅಗ್ನಿ ಅವಘಡಕ್ಕೆ ತುತ್ತಾಗಿದ್ದು, ಬೆಳೆಯನ್ನು ತುಂಬಿಕೊಂಡು ಬೆಂಗಳೂರು ಕಡೆಗೆ ಹೊರಟಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿದ್ಯುತ್ ತಂತಿ ಲಾರಿಗೆ ತಗುಲಿದ್ದೇ ತಡ, ಕ್ಷಣಮಾತ್ರದಲ್ಲಿ ಬೆಂಕಿ ಆವರಿಸಿದೆ. ಲೋಡ್ ಮಾಡಲಾಗಿದ್ದ ಮೆಣಸಿನಕಾಯಿ ಸೇರಿದಂತೆ ಸಂಪೂರ್ಣ ಲಾರಿ ಬೆಂಕಿಯಿಂದ ಸುಟ್ಟು ಹೋಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಅಂತಿಮವಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.