ಬೆಂಗಳೂರು: ಹೆತ್ತಮಕ್ಕಳನ್ನೇ ಕತ್ತುಹಿಸುಕಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಂದೆಯ ಕರಾಳ ಮುಖವಾಡ ಪೊಲೀಸ್ ವಿಚಾರಣೆ ಬಯಲಾಗಿದ್ದು, ತನ್ನ ಅರ್ಹತೆ ಬಗ್ಗೆ ಪತ್ನಿಗೂ ಸುಳ್ಳನ್ನೇಳಿದ್ದ ಎಂದು ತಿಳಿದುಬಂದಿದೆ.
ಕೇರಳ ಮೂಲದ ಆರೋಪಿ ಜತಿನ್ ತಮಿಳುನಾಡು ಮೂಲದ ಲಕ್ಷ್ಮಿಶಂಕರಿಯನ್ನು ಪ್ರೀತಿಸಿ ಏಳು ವರ್ಷದ ಹಿಂದೆ ಮುದವೆಯಾಗಿದ್ದ. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬರುವಾಗ ರೈಲಿನಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಕೆಲ ದಿನಗಳ ಬಳಿಕ ಸ್ನೇಹ, ಪ್ರೀತಿಗೆ ತಿರುಗಿ ವಿವಾಹದಲ್ಲಿ ಇಬ್ಬರು ಒಂದಾಗಿದ್ದರು.
ಲಕ್ಷ್ಮಿಗೆ ಬೆಂಗಳೂರಿನಲ್ಲಿ ಮದುವೆಗೂ ಮುಂಚೆ ಪಿಜಿ ವ್ಯವಸ್ಥೆ ಮತ್ತು ಇತರ ಸಹಾಯವನ್ನು ಜತಿನ್ ಮಾಡಿದ್ದ. ತಾನು ಬಿಕಾಂ ಮಾಡಿದ್ದು, ಇವಾಗ ಎಂಬಿಎ ಮಾಡುತ್ತಿರುವುದಾಗಿ ಸುಳ್ಳು ಹೇಳಿಕೊಂಡಿದ್ದ. ಆದರೆ, ಆರೋಪಿ ಜತಿನ್ ಓದಿದ್ದು ಕೇವಲ ಪಿಯುಸಿ.
ಬಿಇ ಮಾಡಿಕೊಂಡಿದ್ದ ಲಕ್ಷ್ಮಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮದುವೆಯ ಬಳಿಕ ದಂಪತಿ ಅಮೆರಿಕದಲ್ಲಿ ಮೂರ್ನಾಲ್ಕು ವರ್ಷ ಇದ್ದರು. ಲಕ್ಷ್ಮಿಯ ಕೆಲಸ ಮೆಚ್ಚಿ ಅವರ ಕಂಪನಿಯೇ ಅಮೆರಿಕಗೆ ಕಳಿಸಿತ್ತು. ಈ ವೇಳೆ ಪತಿಯನ್ನೂ ತನ್ನೊಂದಿಗೆ ಕರೆದುಕೊಂಡು ಹೋಗಿದ್ದಳು. ಕೆಲ ವರ್ಷದ ಬಳಿಕ ಬೆಂಗಳೂರಿಗೆ ವಾಪಸ್ ಆಗಿ ಕೆಲಸ ಮಾಡಿಕೊಂಡಿದ್ದಳು.
ಇತ್ತ ಆರೋಪಿ ಜತಿನ್ ಏನು ಕೆಲಸ ಮಾಡದೆ ಬೀದಿ ಬಸವನ ಹಾಗೆ ಓಡಾಡಿಕೊಂಡಿದ್ದ. ಕೆಲಕಾಲ ಅಲ್ಲಿ ಇಲ್ಲಿ ಅಂತ ಹೋಟೆಲ್ ಶೆಫ್ ಅಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ಬಿಟ್ಟು ಮನೆಯಲ್ಲೆ ಇರುತ್ತಿದ್ದ. ಸದಾ ಕಾಲ ಹೆಂಡತಿಯ ಜತೆ ಜಗಳ ಮಾಡಿಕೊಂಡು ಇರುತ್ತಿದ್ದ ಎಂದು ತಿಳಿದುಬಂದಿದೆ.
ನಿನ್ನೆ ನಡೆಯಿತು ದುರಂತ
ದಂಪತಿ ನಡುವಿನ ಜಗಳ ತಾರಕಕ್ಕೇರಿ ಮಕ್ಕಳನ್ನು ತನ್ನ ಹಾಗೆ ಬೆಳಸುತ್ತಿಲ್ಲ. ಅಮ್ಮ ಲಕ್ಷ್ಮಿಯ ಹಾಗೆ ಬೆಳೆಯುತ್ತಿವೆ ಎಂಬ ಕಾರಣಕ್ಕೆ ಇಬ್ಬರು ಮಕ್ಕಳನ್ನು ಜತಿನ್ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಶುಕ್ರವಾರ ಸಂಜೆ ಆರು ಗಂಟೆಯ ಸಮಯಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಅಕ್ಷಯನಗರದ ಹನಿ ಡಿವ್ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆದಿದ್ದು, ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)