ಸಿಎಂ ಯೋಗಿ ಆದಿತ್ಯನಾಥ್​ ಸೂಚನೆಯಂತೆ ಬಾಲಿವುಡ್​ ಸಿಂಗರ್​ ಕನ್ನಿಕಾ ಕಪೂರ್​ ವಿರುದ್ಧ ಎಫ್​ಐಆರ್​ ದಾಖಲು

Kannika
Published on

ಲಖನೌ: ಕರೊನಾ ವೈರಸ್​ ಸೋಂಕು ತಗುಲಿರುವ ಬಾಲಿವುಡ್​ ಪ್ರಖ್ಯಾತ ಗಾಯಕಿ ಕನ್ನಿಕಾ ಕಪೂರ್​ ಅವರಿಗೆ ಆರೋಗ್ಯ ಸಮಸ್ಯೆ ಮಾತ್ರವಲ್ಲದೇ, ಇದೀಗ ಕಾನೂನಾತ್ಮಕ ತೊಡಕನ್ನು ಎದುರಿಸುವಂತಾಗಿದೆ.

ಉತ್ತರ ಪ್ರದೇಶ ಸರ್ಕಾರದ ಸೂಚನೆಯಡಿಯಲ್ಲಿ ಬೇಬಿ ಡಾಲ್​ ಸಿಂಗರ್​ ವಿರುದ್ಧ ಸಾರ್ವಜನಿಕರಿಗೆ ತೊಂದರೆ ತಂದಿಟ್ಟ ಪ್ರಕರಣದಡಿಯಲ್ಲಿ ದೂರು ದಾಖಲಾಗಿದೆ. ಸರೋಜಿನಿ ನಗರ ಪೊಲೀಸ್​ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್​ 188, 269 ಮತ್ತು 270ರ ಅಡಿಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ.

ದೂರಿನಲ್ಲಿರುವಂತೆ ಮಾರ್ಚ್​ 14ರಂದು ಕನ್ನಿಕಾ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸೋಂಕಿಗೆ ಒಳಗಾಗಿದ್ದರು. ಆದರೆ, ಸ್ವಯಂ ಪ್ರತ್ಯೇಕತೆಗೆ ಒಳಗೊಳ್ಳದೆ, ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಕಚೇರಿ ವರದಿ ಅನ್ವಯ ದೂರು ದಾಖಲಿಸಿರುವುದಾಗಿ ಲಖನೌ ಪೊಲೀಸ್​ ಆಯುಕ್ತರಾದ ಸುಜಿತ್​ ಪಾಂಡೆ ತಿಳಿಸಿದ್ದು, ದೂರಿನಲ್ಲಿರುವಂತೆ ಕನ್ನಿಕಾ ಅವರು ಮಾರ್ಚ್​ 14ರಂದು ಏರ್​ಪೋರ್ಟ್​ಗೆ ಆಗಮಿಸಲಿಲ್ಲ. ಮಾರ್ಚ್​ 11ರಂದು ಆಗಮಿಸಿದರು. ದಿನಾಂಕದಲ್ಲಿ ಸ್ವಲ್ಪ ಗೊಂದಲವಿದೆ. ಅದನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಯೋಗಿ ಆದಿತ್ಯಾನಾಥ್​​ ನಿವಾಸದಲ್ಲಿ ಶುಕ್ರವಾರ ನಡೆದ ಉನ್ನತಮಟ್ಟದ ಸಭೆಯಲ್ಲಿ ಗಾಯಕಿ ಕನ್ನಿಕಾ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ಅಧಿಕಾರಿಗಳಿಗೆ ಸಿಎಂ ಯೋಗಿ ಸೂಚಿಸಿದ್ದಾರೆ.

ಕನ್ನಿಕಾ ತಂಗುತ್ತಿದ್ದ ತಾಜ್​ ಹೋಟೆಲ್​ ರೂಮ್​ ನಂಬರ್​ 602 ಅನ್ನು ಎರಡು ದಿನಗಳವರೆಗೆ ಬಂದ್​ ಮಾಡಲಾಗಿದೆ. ಕನ್ನಿಕಾ ಅವರ ಚಲನಾವಲನಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪರಿಶೀಲಿಸಲಾಗುತ್ತಿದೆ.

ಲಂಡನ್​ನಿಂದ ಮರಳಿದ ಕನ್ನಿಕಾ ಕರೊನಾ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಗಾಗದೇ ರೋಗದ ಲಕ್ಷಣಗಳು ಬೆಳೆಯುತ್ತಿದ್ದರೂ ಅನೇಕ ಕಾರ್ಯಕ್ರಮಗಳಲ್ಲಿ ಆರಾಮವಾಗಿ ಭಾಗಿಯಾಗಿದ್ದರಿಂದ ನಿರ್ಲಕ್ಷ್ಯ ಆರೋಪದಲ್ಲಿ ದೂರು ದಾಖಲಿಸಲಾಗಿದೆ.

ಕನ್ನಿಕಾ ಭಾಗವಹಿಸಿದ್ದ ಪಾರ್ಟಿಯಲ್ಲಿ ಅನೇಕ ರಾಜಕಾರಣಿಗಳು ಸಹ ಇದ್ದರು. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಅವರ ಮಗ ಬಿಜೆಪಿ ಸಂಸದ ದುಶ್ಯಂತ್​ ಸಿಂಗ್​, ಉತ್ತರ ಪ್ರದೇಶ ಆರೋಗ್ಯ ಸಚಿವ ಜೈ ಪ್ರತಾಪ್​ ಸಿಂಗ್​ ಹಾಗೂ ಕಾಂಗ್ರೆಸ್​ ನಾಯಕ ಜಿತಿನ್​ ಪ್ರಸಾದ್​ ಉಪಸ್ಥಿತರಿದ್ದರು. ಅಲ್ಲದೆ, ಪಾರ್ಟಿಯಲ್ಲಿ 180 ಮಂದಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ಇದೀಗ ಕನ್ನಿಕಾ ಕಾರಣದಿಂದಾಗಿ ಮೇಲಿನ ರಾಜಕಾರಣಿಗಳು ಸ್ವಯಂ ಪ್ರತ್ಯೇಕತೆಯನ್ನು ಅನುಸರಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net