ನ್ಯೂಸ್

ಮದುವೆ ಮನೆಯಲ್ಲಿ ಹರಿಯಿತು ನೆತ್ತರು; ಹೆಂಡಿತಿಯೊಂದಿಗೆ ನೃತ್ಯ ಮಾಡಿದ್ದಕ್ಕೆ ಇಬ್ಬರು ಸಹೋದರರ ಜೀವ ತೆಗೆದ ಅಣ್ಣ!

ಛತ್ತೀಸ್‌ಗಢ: ಅಲ್ಲಿ ಸೇರಿದ್ದ ಎಲ್ಲರೂ ಮದುವೆಯ ಸಂಭ್ರಮದಲ್ಲಿದ್ದರು. ಆದರೆ ಕುಣಿದು ಕುಪ್ಪಳಿಸುತ್ತಿದ್ದ ಎಲ್ಲರ ಸಂತಸ ಒಂದು ಕ್ಷಣ ನಿಂತು ಹೋಗಿದೆ. ಮದುವೆ ಮನೆ ಮಸಣದ ಮನೆಯಾಗಿ ಬದಲಾಗಿದೆ. ಇದಕ್ಕೆ ಕಾರಣ ಕುಡುಕನೊಬ್ಬನ ಹೀನ ಕೃತ್ಯ. ಹೌದು, ಎಲ್ಲರೂ ಮದುವೆ ಸಮಾರಂಭದ ಖುಷಿಯಲ್ಲಿದ್ದಾಗಲೇ, ಅಲ್ಲಿ ಇಬ್ಬರ ಹೆಣ ಬಿದ್ದಿದೆ. ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ.

ಮದುವೆ ಸಮಾರಂಭದಲ್ಲಿ ಕುಡುಕನೊಬ್ಬ ತನ್ನ ಇಬ್ಬರು ಕಿರಿಯ ಸಹೋದರರನ್ನು ಹತ್ಯೆ ಮಾಡಿದ್ದಾನೆ. ಅಲ್ಲದೆ ಸೋದರ ಮಾವ ಹಾಗೂ ಅಣ್ಣನ ಮೇಲೂ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಕಬೀರ್‌ಧಾಮ್ ಜಿಲ್ಲೆಯಲ್ಲಿಯಲ್ಲಿ ನಡೆದಿದೆ. ಗಾಯಗೊಂಡಾತನನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಬಂಗೂರ ಗ್ರಾಮದ ತಿನ್ಹಾ ಬೇಗ ಬಂಧಿತ ಆರೋಪಿ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಸಹೋದರರನ್ನೇ ಹತ್ಯೆ ಮಾಡಲು ಕಾರಣ ಇದೀಗ ಪೊಲೀಸರ ತನಿಖೆಯಿಂದ ಬಯಲಾಗಿದೆ. ಸಹೋದರರಿಬ್ಬರು ಮದುವೆ ಮನೆಯಲ್ಲಿ ತನ್ನ ಪತ್ನಿಯೊಂದಿಗೆ ನೃತ್ಯ ಮಾಡಿದ್ದಕ್ಕಾಗಿ ಸಿಟ್ಟಿನಲ್ಲಿ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.

ಆರೋಪಿ ತನ್ನ ಪತ್ನಿಯ ಮೇಲೂ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ಮದ್ಯದ ಅಮಲಿನಲ್ಲಿ ಆರೋಪಿ ಕೃತ್ಯ ಎಸಗಿದ್ದು, ಜಗಳ ಬಿಡಿಸಲು ಬಂದ ಸೋದರ ಮಾವ ಹಾಗೂ ಅಣ್ಣನ ಮೇಲೂ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಲಾಲುಮಂಡ್ ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್)