ನ್ಯೂಸ್

ಬೇಡ ಎನ್ನುವ ಮೂಲಕ ಸಮೋಸಾಗೆ ಬೇಜಾರು ಮಾಡ್ಬೇಡಿ: ವೈರಲ್​​ ಆಯ್ತು ಚೆನ್ನೈ ರೆಸ್ಟೋರೆಂಟ್​ ರಶೀದಿ!

ಚೆನ್ನೈ: ಇಲ್ಲಿನ ರೆಸ್ಟೋರೆಂಟ್​ ಒಂದರ ರಶೀದಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದರ ಹಿಂದಿನ ಕಾರಣ ನಿಮ್ಮನ್ನು ನಗೆಗಡಲಲ್ಲಿ ತೇಲಾಡುವಂತೆ ಮಾಡುತ್ತದೆ. ರಶೀದಿಯ ಫೋಟೋವನ್ನು ರೆಡ್ಡಿಟ್​ ಜಾಲತಾಣದಲ್ಲಿ ಶೇರ್​ ಮಾಡಲಾಗಿದ್ದು, ಸಮೋಸಾಗೆ ಬೇಜಾರು ಮಾಡಬೇಡಿ ಎಂಬ ಅಡಿಬರಹ ಗೊಂದಲಕ್ಕೀಡುಮಾಡಿದೆ.

ರಶೀದಿಯ ಕೆಳಗಡೆ ಜನರನ್ನು ಅಥವಾ ಗ್ರಾಹಕರನ್ನು ಉದ್ದೇಶಿಸಿ ಸಮೋಸಾ ಅಥವಾ ಕಚೋರಿಯನ್ನು ಬೇಡ ಎಂದು ಹೇಳುವ ಮೂಲಕ ಅವುಗಳಿಗೆ ಬೇಜಾರು ಮಾಡಬೇಡಿ ಎಂದು ಬರೆಯಲಾಗಿದೆ.

ಚೆನ್ನೈನ ಊಗಿಯಂಪೇಟೆಯ ಹಳೆಯ ಮಹಾಬಲಿಪುರಂ ರಸ್ತೆಯಲ್ಲಿರುವ ಶ್ರೀ ಚಾಟ್ಸ್​ ಮಿಠಾಯಿ ಮತ್ತು ನಮ್ಕೀನ್​ ರೆಸ್ಟೋರೆಂಟ್​ಗೆ ಸಂಬಂಧಿಸಿದ ರಶೀದಿ ಇದಾಗಿದೆ. ರಶೀದಿಯಲ್ಲಿರುವಂತೆ ಗ್ರಾಹಕರು 150 ರೂ. ಬೆಲೆಯ ಎರಡು ಸಮೋಸಾ ಚಾಟ್ಸ್, 90 ರೂ. ಬೆಲೆ ಒಂದು ಮಿಕ್ಸ್​ಡ್​ ಚಾಟ್​, 105 ರೂ. ಬೆಲೆಯ ಒಂದು ಪ್ಲೇಟ್​ ಪಾವ್​ ಭಜಿ ಮತ್ತು 70 ರೂ. ಬೆಲೆಯ ದಹಿ ಭೇಲ್​ ಪುರಿಯನ್ನು ಕೊಂಡುಕೊಂಡಿದ್ದಾರೆ. ಇವುಗಳನ್ನು ನಮೂದಿಸಿರುವುದರ ಕೆಳಗೆ ಸಮೋಸಾ ಬೇಡ ಎನ್ನುವ ಮೂಲಕ ಅವುಗಳಿಗೆ ಬೇಜಾರು ಮಾಡಬೇಡಿ ಎಂದು ರೆಸ್ಟೋರೆಂಟ್​ನವರು ಬರೆದಿದ್ದಾರೆ.

ರಶೀದಿಯನ್ನು ರೆಡ್ಡಿಟ್​ ಜಾಲತಾಣದಲ್ಲಿ ಶೇರ್​ ಮಾಡಲಾಗಿದ್ದು, ಭಾರೀ ವೈರಲ್​ ಆಗಿದೆ. ಸಾಕಷ್ಟು ಮಂದಿ ತಮ್ಮದೇ ರೀತಿಯಲ್ಲಿ ಹಾಸ್ಯಾಸ್ಪದ ಕಾಮೆಂಟ್​ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಸಮೋಸಾ ಬೇಜಾರು ಮಾಡಬಾರದು ಸರಿ ಆದ್ರೆ ಸಮೋಸಾ ನನ್ನ ಜೇಬಿಗೆ ತೊಂದರೆ ನೀಡುತ್ತದೆ ಎಂದು ನೆಟ್ಟಿಗನೊಬ್ಬ ಹೇಳಿದ್ದಾರೆ. (ಏಜೆನ್ಸೀಸ್​)