ಚೆನ್ನೈ: ಹುಟ್ಟುವಾಗಲೇ ನಾಲಿಗೆಯಲ್ಲಿ ಥೈರೊಗ್ಲೋಸಲ್ ಸಿಸ್ಟ್ಹೊಂದಿ ಕಷ್ಟಪಡುತ್ತಿದ್ದ ಮಗುವಿಗೆ ಚೆನ್ನೈ ವೈದ್ಯರು ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ.
ಮಗುವಿಗೆ ಆರು ತಿಂಗಳಾಗಿತ್ತು. ಅದರ ಕುತ್ತಿಗೆ ಮುಂಭಾಗದಲ್ಲಿ, ನಾಲಿಗೆಯ ಮೇಲೆ ದ್ರವ ತುಂಬಿದ ಗಡ್ಡೆಯಿತ್ತು. ಈ ಸಮಸ್ಯೆ ಹುಟ್ಟಿನಿಂದಲೇ ಕಾಣಿಸಿಕೊಂಡಿತ್ತು.
ಚೆನ್ನೈನ ರೇನ್ಬೋ ಮಕ್ಕಳ ಆಸ್ಪತ್ರೆಯ ತಜ್ಞ ವೈದ್ಯ ಡಾ. ಮೂರ್ತಿಯವರ ನೇತೃತ್ವದಲ್ಲಿ ಮಗುವಿಗೆ ಚಿಕಿತ್ಸೆ ಪ್ರಾರಂಭಿಸಲಾಯಿತು. ಆದರೆ ಆ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕುವುದೊಂದೇ ಮಾರ್ಗವಾಗಿತ್ತು.
ಆ ಪುಟ್ಟ ಮಗುವಿನ ಹೆಸರು ತೀರನ್. ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಗಂಟಲು ಉಬ್ಬಿಕೊಂಡಸ್ಥಿತಿಯಲ್ಲಿತ್ತು. ಹುಟ್ಟುವಾಗಿನಿಗಿಂತ ಆ ಗಡ್ಡೆ ಸ್ವಲ್ಪ ದೊಡ್ಡಾಗಿತ್ತು. ಹೀಗಾಗಿ ಮಗುವಿನ ಬಾಯಿಯೂ ಊದಿತ್ತು. ಅದಕ್ಕೆ ತಾಯಿ ಹಾಲು ಕುಡಿಯಲೂ ಆಗದ ಸ್ಥಿತಿ ಇತ್ತು. ಇದನ್ನೂ ಓದಿ: ಭಾರತ ಈಗಾಗಲೇ ಆರ್ಥಿಕ ಚೇತರಿಕೆಯ ಹಸಿರು ಚಿಗುರು ನೋಡುತ್ತಿದೆ: ಪ್ರಧಾನಿ ಮೋದಿ
ಕೂಡಲೇ ಮಗುವಿಗೆ ಎಂಆರ್ಐ ಸ್ಕ್ಯಾನ್ ಮಾಡಲಾಯಿತು. ಸ್ಕ್ಲೆರೊಥೆರಪಿ ಮಾಡಿ, ಗುಣಪಡಿಸಲು ಸಾಧ್ಯವಿಲ್ಲ ಎಂಬುದು ತಿಳಿಯಿತು. ಆದರೆ ತುಂಬ ದಿನ ಬಿಡುವಂತೆ ಇರಲಿಲ್ಲ. ಆ ಗಡ್ಡೆ ಮತ್ತಷ್ಟು ದೊಡ್ಡದಾಗುವ ಸಾಧ್ಯತೆ ಇತ್ತು. ವೈದ್ಯರು ತಡ ಮಾಡದೆ ಮಗುವಿನ ನಾಲಿಗೆ ಮೇಲಿದ್ದ ಸಿಸ್ಟ್ ಬಗ್ಗೆ ಅಧ್ಯಯನ ಮಾಡಿದರು. ಅದನ್ನು ಸರ್ಜರಿ ಮಾಡಿ, ತೆಗೆಯದೆ ಬೇರೆ ದಾರಿ ಇರಲಿಲ್ಲ.
ಅದನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದ ಬಳಿಕ ವೈದ್ಯರು, ಗಡ್ಡೆ ಯಾವ ಸ್ಥಿತಿಯಲ್ಲಿ ಇತ್ತು ಎಂಬುದನ್ನು ತಿಳಿಸಿದ್ದಾರೆ.
ಈ ಗಡ್ಡೆಯನ್ನು ಅತ್ಯಂತ ನಾಜೂಕಿನಿಂದ ಹೊರತೆಗೆಯಬೇಕಿತ್ತು. ಅದು ಸೂಕ್ಷ್ಮವಾದ ಜಾಗದಲ್ಲಿತ್ತು ಎಂದು ಡಾ. ಮೂರ್ತಿ ಅವರು ತಿಳಿಸಿದ್ದಾರೆ.
ಸರ್ಜರಿಯಾಗಿ ಮೂರೇ ದಿನಕ್ಕೆ ಮಗುವೂ ಡಿಸ್ಚಾರ್ಜ್ ಆಗಿದೆ. ಸುಧಾರಿಸಿಕೊಳ್ಳುತ್ತಿದ್ದು, ಹಾಲು ಕುಡಿಯುತ್ತಿದೆ ಎಂದೂ ಹೇಳಿದ್ದಾರೆ. (ಏಜೆನ್ಸೀಸ್)