ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈ ಮೂಲದ ನವವಿವಾಹಿತ ಜೋಡಿಯೊಂದು ಹನಿಮೂನ್ ಪ್ರವಾಸದ ವೇಳೆ ದುರಂತ ಸಾವಿಗೀಡಾಗಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ಮೃತರನ್ನು ಡಾ. ಲೋಕೇಶ್ವರನ್ ಮತ್ತು ಡಾ. ವಿಬುಷ್ನಿಯಾ ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ವೈದ್ಯರಾಗಿದ್ದರು. ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಹನಿಮೂನ್ಗೆಂದು ಇಂಡೋನೇಷ್ಯಾದ ಬಾಲಿ ದ್ವೀಪಕ್ಕೆ ತೆರಳಿದ್ದರು. ಫೋಟೋಗೆ ಪೋಸ್ ಕೊಡುವ ವೇಳೆ ಇಬ್ಬರು ನೀರುಪಾಲಾಗಿದ್ದಾರೆ.
ಜೂನ್ 1ರಂದು ಮದುವೆಯಾದ ಲೋಕೇಶ್ವರನ್ ಮತ್ತು ವಿಬುಷ್ನಿಯಾ ತಮ್ಮ ಹೊಸ ಪ್ರಯಾಣವನ್ನು ಒಟ್ಟಿಗೆ ಆಚರಿಸಲು ಇಂಡೋನೇಷ್ಯಾಕ್ಕೆ ತೆರಳಿದ್ದರು. ಅನೇಕ ಜೋಡಿಗಳಂತೆ, ಅವರು ಕೂಡ ಸುಂದರವಾದ ನೆನಪುಗಳನ್ನು ಸೆರೆಹಿಡಿಯಲು ಉತ್ಸುಕರಾಗಿದ್ದರು. ಸಮುದ್ರದಲ್ಲಿ ಮೋಟಾರ್ ಬೋಟ್‌ನಲ್ಲಿ ಫೋಟೋಶೂಟ್ ಮಾಡಲು ನಿರ್ಧರಿಸಿದರು. ದುರಂತವೆಂದರೆ ಚಿತ್ರೀಕರಣದ ವೇಳೆ ಇಬ್ಬರೂ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಎರಡೂ ಕುಟುಂಬಗಳು ಆಘಾತಕ್ಕೆ ಒಳಗಾಗಿವೆ. ಮಕ್ಕಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ದಂಪತಿ ಮೃತದೇಹಗಳನ್ನು ಹುಟ್ಟೂರಾದ ಚೆನ್ನೈಗೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ. (ಏಜೆನ್ಸೀಸ್)