ನ್ಯೂಸ್

ಖಾಸಗಿ ವಿಡಿಯೋ, 3 ಪುಟಗಳ ಡೆತ್​ನೋಟ್​! ಬ್ಲಾಕ್​ಮೇಲ್​ಗೆ ಬೆದರಿ ಚಾರ್ಟರ್ಡ್ ಅಕೌಂಟೆಂಟ್ ಆತ್ಮಹತ್ಯೆ | Chartered Accountant

ಮೋಹನ್​ ಶೆಟ್ಟಿ

Chartered Accountant: ಖಾಸಗಿ ವಿಡಿಯೋ ಲೀಕ್​ ಮಾಡುವುದಾಗಿ ಹಾಗೂ ಮೂರು ಕೋಟಿ ರೂ. ಹಣ ಕೊಡುವಂತೆ ಮಾನಸಿಕವಾಗಿ ಚಿತ್ರಹಿಂಸೆ ನೀಡಿದ ಕಾರಣ ಚಾರ್ಟರ್ಡ್ ಅಕೌಂಟೆಂಟ್ ಆತ್ಮಹತ್ಯೆಗೆ ಶರಣಾದ ಘಟನೆ ಮುಂಬೈನಲ್ಲಿ ವರದಿಯಾಗಿದೆ.

ಸಂಸ್ಥೆ, ಸಂಬಳ ಗೊತ್ತಿತ್ತು!

ಅಧಿಕಾರಿಗಳ ಪ್ರಕಾರ, ಮೃತ ಚಾರ್ಟರ್ಡ್ ಅಕೌಂಟೆಂಟ್​ನನ್ನು ರಾಜ್ ಲೀಲಾ ಮೋರ್ (33) ಎಂದು ಗುರುತಿಸಲಾಗಿದೆ. ತಮ್ಮ ಬಲೆಗೆ ಸಿಲುಕಿದ ರಾಜ್​ಗೆ, ಮೂರು ಕೋಟಿ ರೂ. ಹಣ ಕೊಡಬೇಕು ಎಂದು ಬೇಡಿಕೆಯಿಟ್ಟ ವಂಚಕರು, ಪಾವತಿ ಮಾಡಲು ನಿರಾಕರಿಸಿದ್ದಲ್ಲಿ ನಿನ್ನ ಖಾಸಗಿ ವಿಡಿಯೋವನ್ನು ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾರೆ. ದುಷ್ಕರ್ಮಿಗಳ ಆಮಿಷ, ಮಾನಸಿಕ ಚಿತ್ರಹಿಂಸೆ ತಾಳಲಾರದ ರಾಜ್​, ಇಂದು (ಜು.08) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾಯುವ ಮೊದಲು ತಮ್ಮ ಸಾವಿಗೆ ಕಾರಣವೇನು? ಯಾರೆಲ್ಲ ಈ ಪರಿಸ್ಥಿತಿಗೆ ಕಾರಣ ಎಂಬುದನ್ನು ಮೂರು ಪುಟಗಳ ಡೆತ್​ನೋಟ್​ನಲ್ಲಿ ರಾಜ್​ ಬರೆದಿದ್ದಾರೆ. ಖಾಸಗಿ ವಿಡಿಯೊವನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ ಆ ಇಬ್ಬರು ವ್ಯಕ್ತಿಗಳೇ ನನ್ನ ಸಾವಿಗೆ ಕಾರಣ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ರಾಹುಲ್ ಪರ್ವಾನಿ ಮತ್ತು ಸಬಾ ಖುರೇಷಿ ಕಳೆದ ಒಂದೂವರೆ ವರ್ಷದಿಂದ ಖಾಸಗಿ ವಿಡಿಯೊವನ್ನು ಹರಿಬಿಡುವುದಾಗಿ ಬೆದರಿಸಿ, ರಾಜ್​ನಿಂದ ಕೋಟಿಗಟ್ಟಲೆ ಹಣವನ್ನು ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ.

ಷೇರು ಪೇಟೆಯಲ್ಲಿ ರಾಜ್​ರ ಬೃಹತ್ ಹೂಡಿಕೆಗಳು ಮತ್ತು ಚಾರ್ಟರ್ಡ್ ಅಕೌಂಟೆಂಟ್ ಆಗಿ ಅವರ ಹೆಚ್ಚಿನ ಸಂಬಳದ ಉದ್ಯೋಗದ ಬಗ್ಗೆ ಆರೋಪಿಗಳಿಗೆ ಮುಂಚಿತವಾಗಿಯೇ ಸ್ಪಷ್ಟ ಮಾಹಿತಿಯಿತ್ತು. ಖಾಸಗಿ ವಿಡಿಯೋ ನೆಪದಲ್ಲಿ ಅವರನ್ನು ಹೆದರಿಸಿ, ಬೆದರಿಸಿ ಕಂಪನಿಯ ಖಾತೆಯಿಂದ ಭಾರಿ ಮೊತ್ತದ ಹಣವನ್ನು ವರ್ಗಾಯಿಸುವಂತೆ ಒತ್ತಾಯಿಸಿರುವುದು ಗೊತ್ತಾಗಿದೆ. ಈ ಇಬ್ಬರೂ ರಾಜ್​ನಿಂದ ಐಷಾರಾಮಿ ಕಾರನ್ನು ತಮ್ಮ ಸ್ವತ್ತಿಗೆ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲನೇ ಪತ್ರದಲ್ಲಿ

ಮೃತ ರಾಜ್​ನ ರೂಮ್​ನಲ್ಲಿದ್ದ ಮೂರು ಪುಟಗಳ ಆತ್ಮಹತ್ಯೆ ಪತ್ರವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ, ಮೂರು ಪತ್ರಗಳಲ್ಲಿ ಮೂರು ಪ್ರತ್ಯೇಕ ವಿಷಯಗಳು ಉಲ್ಲೇಖವಾಗಿವೆ. ಮೊದಲನೇಯದ್ದು ಅವರ ತಾಯಿಗೆ ಸಮರ್ಪಿತವಾಗಿದೆ. ಪತ್ರದಲ್ಲಿ, ಅಮ್ಮ ಕ್ಷಮಿಸಿಬಿಡಿ. ಇನ್ಮುಂದೆ ನಿಮ್ಮಗಳ ಜವಾಬ್ದಾರಿ ನಿಮ್ಮದೇ. ಕುಟುಂಬವನ್ನು ನೋಡಿಕೊಂಡು ಹೋಗಿ ಎಂದು ಬರೆದಿದ್ದಾರೆ.

ಎರಡನೇ ಪತ್ರದಲ್ಲಿ

"ದೀಪಾ ಲಖಾನಿ, ನಿಮ್ಮ ಬಳಿ ಕ್ಷಮೆಯಾಚಿಸಲು ನನ್ನಲ್ಲಿ ಪದಗಳಿಲ್ಲ. ನಾನು ನಿಮ್ಮ ನಂಬಿಕೆಯನ್ನು ಮುರಿದಿದ್ದೇನೆ. ಆದರೆ, ನನ್ನನ್ನು ನಂಬಿರಿ. ನಿಮ್ಮ ನಂಬಿಕೆಯನ್ನು ಮುರಿಯುವ ಉದ್ದೇಶ ನನಗಿರಲಿಲ್ಲ. ಆದರೆ, ಪರಿಸ್ಥಿತಿ ನನ್ನನ್ನು ಹೀಗೆ ಮಾಡಿಸಿತು. ನಾನು ಯಾವುದೇ ವಂಚನೆ ಮಾಡಿದ್ದರೂ, ಅದನ್ನು ನಾನೇ ಮಾಡಿರುವೆ. ಇದರ ಬಗ್ಗೆ ಇತರೆ ಯಾವುದೇ ಉದ್ಯೋಗಿಗಳಿಗೂ ತಿಳಿದಿರಲಿಲ್ಲ. ಶ್ವೇತಾ ಮತ್ತು ಜೈಪ್ರಕಾಶ್‌ಗೆ ಏನೇನಾಗಿದೆ ಎಂಬುದರ ಬಗ್ಗೆ ಕಿಂಚಿತ್ತು ತಿಳಿದಿರಲಿಲ್ಲ. ದಯವಿಟ್ಟು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಡಿ" ಎಂದು ಬರೆದಿದ್ದಾರೆ.

ಮೂರನೇ ಪತ್ರದಲ್ಲಿ

"ನಾನು, ರಾಜ್ ಮೋರೆ, ಇಂದು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ಇದಕ್ಕೆ ಕಾರಣ, ರಾಹುಲ್ ಪರ್ವಾನಿ ಮತ್ತು ಸಬಾ ಖುರೇಷಿ. ಇವರು ತಿಂಗಳುಗಟ್ಟಲೆ ನನ್ನನ್ನು ಬ್ಲಾಕ್‌ಮೇಲ್ ಮಾಡಿ, ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ. ನನ್ನ ವೈಯಕ್ತಿಕ ಉಳಿತಾಯ ಹಣವಲ್ಲದೇ, ನನ್ನ ಕಂಪನಿಯ ಖಾತೆಯಿಂದಲೂ ಹಣ ವರ್ಗಾಯಿಸಿಕೊಂಡಿದ್ದಾರೆ. ರಾಹುಲ್ ಪರ್ವಾನಿ ಮತ್ತು ಸಬಾ ಖುರೇಷಿ ನನ್ನ ಸಾವಿಗೆ ಕಾರಣರು" ಎಂದು ರಾಜ್ ಬರೆದಿದ್ದಾರೆ,(ಏಜೆನ್ಸೀಸ್).