ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ನಿತ್ಯ ಒಂದಲ್ಲ ಒಂದು ಹೊಸ ಬೆಳವಣಿಗೆಗೆಳಿಗೆ ಸುಶಾಂತ್ ಪ್ರಕರಣ ಎಡೆಮಾಡಿಕೊಡುತ್ತಿದೆ. ರಿಯಾಗೆ ಸಂಬಂಧಿಸಿ ಬೆಳವಣಿಗೆಗಳು ಒಂದೆಡೆ ನಡೆಯುತ್ತಿದ್ದರೆ, ಇತ್ತ ಸುಶಾಂತ್ ಆರೋಗ್ಯದ ಬಗೆಗಿನ ಸುದ್ದಿಗಳು ಹಲವು ಅನುಮಾನಗಳಿಗೆ ಕಾರಣವಾಗುತ್ತಿವೆ. ಇದೀಗ ರಿಯಾ ಸಂಗ ಮಾಡಿದ ಮೇಲೆ ಸುಶಾಂತ್ ಹೇಗೆಲ್ಲ ಬದಲಾದರು ಎಂಬುದನ್ನು ಸುಶಾಂತ್ ಅವರ ಸಹಾಯಕ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.
ಸುಶಾಂತ್ ಅವರೊಂದಿಗೆ ಎರಡು ವರ್ಷಗಳ ಕಾಲ ಕೆಲಸ ಮಾಡಿದ ಸಹಾಯಕ ಅಂಕಿತ್ ಆಚಾರ್ಯ ರಿಯಾ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ಸುಶಾಂತ್ ಜೀವನಕ್ಕೆ ರಿಯಾ ಆಗಮನವಾದ ಬಳಿಕ ಏನೆಲ್ಲ ಘಟಿಸಿತು. ಬ್ಯಾಂಕ್ ಖಾತೆಯಲ್ಲಿನ ಹಣ ಏನೆನಾಯಿತು ಎಂಬ ಬಗ್ಗೆ ಅಂಕಿತ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.
‘ನಾನು 2017ರ ಜುಲೈನಿಂದ 2019ರ ಜುಲೈವರೆಗೂ ಸುಶಾಂತ್ ಅವರ ಜತೆ ಕೆಲಸ ಮಾಡಿದ್ದೇನೆ. 2019ರ ಜನವರಿ ವರೆಗೂ ಸುಶಾಂತ್ ಬ್ಯಾಂಕ್ ಖಾತೆಯಲ್ಲಿ 30 ಕೋಟಿಗೂ ಅಧಿಕ ಹಣವಿತ್ತು. ರಿಯಾ ಜತೆಗೆ ವಿದೇಶಿ ಪ್ರವಾಸ ಮುಗಿಸಿ ಬರುತ್ತಿದ್ದಂತೆ, ಸುಶಾಂತ್ ಮೊದಲಿನಂತಿರಲಿಲ್ಲ. ಒಲ್ಲದ ನಗು, ಕಣ್ಣುಗಳ ಸುತ್ತ ಡಾರ್ಕ್ ಸರ್ಕಲ್ಗಳಿದ್ದವು. ಇದೆಲ್ಲದರ ಜತೆಗೆ ರಿಯಾ ಸಾಕಷ್ಟು ಪೂಜೆ, ಹೋಮ ಹವನ ಮಾಡಿಸಿದ್ದರು. ಯಾವ ದೇವರು ಎಂಬ ಬಗ್ಗೆಯೂ ಅವರು ಮಾಹಿತಿ ನೀಡಿಲ್ಲ. ಇನ್ನೊಂದು ಗಮನಿಸಿದ ವಿಚಾರ ಏನೆಂದರೆ, ಸುಶಾಂತ್ ಯಾವತ್ತೂ ಅವರ ಕೋಣೆಯ ಬಾಗಿಲನ್ನು ಲಾಕ್ ಮಾಡಿಕೊಳ್ಳುತ್ತಿರಲಿಲ್ಲ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಅಂಕಿತ್.
ಸದ್ಯ ಪ್ರಕರಣದ ಗಂಭೀರತೆ ಅರಿತು, ಸಿಬಿಐಗೆ ಒಪ್ಪಿಸಲಾಗಿದೆ. ಇತ್ತ ಮುಂಬೈ ಪೊಲೀಸ್ ಮಹತ್ವದ ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ ಎಂಬ ಆರೋಪವನ್ನು ಬಿಹಾರ ಪೊಲೀಸ್ ಮಾಡುತ್ತಿದ್ದು, ಪೊಲಿಸರ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. (ಏಜೆನ್ಸೀಸ್)