ನ್ಯೂಸ್

ಬಸ್​ನಲ್ಲಿನ ಚಿಲ್ಲರೆ ಸಮಸ್ಯೆಗೆ ಕಂಡಕ್ಟರ್ ಕೊರಳಲ್ಲೇ ಪರಿಹಾರ!; ಅಂತೂ ಜಾರಿಗೆ ಬಂತು ಹಳೇ ಬೇಡಿಕೆ…

Webdesk - Ravikanth

ಬೆಂಗಳೂರು: ಯಾವುದೇ ಬಸ್​ನಲ್ಲೂ ಚಿಲ್ಲರೆ ಸಮಸ್ಯೆ ಮಾತ್ರ ತಪ್ಪಿದ್ದಲ್ಲ. ಚಿಲ್ಲರೆ ಕೊಡಿ ಎಂಬ ಕಂಡಕ್ಟರ್​ ಬೇಡಿಕೆಯನ್ನು ಪ್ರಯಾಣಿಕರಲ್ಲಿ ಕೆಲವರಾದರೂ ಎದುರಿಸಬೇಕಾಗುತ್ತದೆ. ಹಲವು ವರ್ಷಗಳಿಂದ ಕಾಡುತ್ತಲೇ ಇರುವ ಈ ಸಮಸ್ಯೆಗೆ ಇದೀಗ ಕಂಡಕ್ಟರ್​ ಕೊರಳಲ್ಲೇ ಪರಿಹಾರ ಕಲ್ಪಿಸಲಾಗಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆಯ್ದ ಕೆಲವು ಬಸ್​ಗಳಲ್ಲಿ ಚಿಲ್ಲರೆ ಸಮಸ್ಯೆಗೆ ಈ ಪರಿಹಾರ ಒದಗಿಸಲಾಗಿದೆ. ಅಂದರೆ ಆ ಬಸ್​ನ ಕಂಡಕ್ಟರ್​ಗೆ ಖಾತೆಯ ಕ್ಯೂರ್​ ಕೋಡ್ ಕೊಟ್ಟು ಅದನ್ನು ಕೊರಳಿಗೆ ನೇತು ಹಾಕಿಕೊಂಡಿರಲು ಇಲಾಖೆ ಸೂಚಿಸಿದೆ. ಚಿಲ್ಲರೆ ಇರದ ಪ್ರಯಾಣಿಕರು ಈ ಕ್ಯೂರ್​ ಕೋಡ್ ಸ್ಕ್ಯಾನ್ ಮಾಡಿ ಪಾವತಿಸಿ ಟಿಕೆಟ್ ಖರೀದಿಸಬಹುದು. ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದರೆ ಇದು ಎಲ್ಲೆಡೆ ಜಾರಿಗೆ ಬರುವ ಸಾಧ್ಯತೆ ಇದೆ.

ಅಂದಹಾಗೆ, ಸಾರಿಗೆ ಸಂಸ್ಥೆ ಇಂಥದ್ದೊಂದು ವ್ಯವಸ್ಥೆ ಮಾಡಿದ್ದರೂ ಇದು ತಡವೇ ಎನ್ನಬಹುದು. ಏಕೆಂದರೆ ಚಿಲ್ಲರೆ ಸಮಸ್ಯೆಯಿಂದ ಬೇಸತ್ತ ಪ್ರಯಾಣಿಕರು ಕ್ಯೂರ್​ ಕೋಡ್ ಸಿಸ್ಟಂ ತನ್ನಿ ಎಂದು ಎರಡು ವರ್ಷಗಳ ಹಿಂದಿನಿಂದಲೇ ಬೇಡಿಕೆ ಇಡುತ್ತ ಬಂದಿದ್ದರು. ಬಿಎಂಟಿಸಿ ಬಸ್​ನಲ್ಲಿ ಚಿಲ್ಲರೆ ಸಮಸ್ಯೆ ತಪ್ಪಿಸಲು ಏಕೆ ಕ್ಯೂರ್ ಕೋಡ್ ವ್ಯವಸ್ಥೆ ಕಲ್ಪಿಸಬಾರದು ಎಂದು ಪ್ರಯಾಣಿಕರೊಬ್ಬರು 2021ರಲ್ಲೇ ಕೇಳಿದ್ದರು. ಕಡೆಗೂ ಅದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮೂಲಕ ಜಾರಿಗೆ ಬಂದಿದೆ.