ಬೆಂಗಳೂರು: ಚಂದ್ರನಿಂದ ಬಂದ ಮೊದಲ ಚಿತ್ರ ಎಂದು ವಿರೂಪಗೊಳಿಸಿದ ಚಾಯ್ವಾಲಾ ಚಿತ್ರವನ್ನು ನಟ ಪ್ರಕಾಶ್ ರಾಜ್ ಮೊನ್ನೆ ಪೋಸ್ಟ್ ಮಾಡಿಕೊಂಡಿದ್ದು, ವ್ಯಾಪಕ ಟೀಕೆಗೆ ಒಳಗಾಗಿತ್ತು. ಮಾತ್ರವಲ್ಲ, ಅದೇ ಕಾರಣಕ್ಕೆ ಪ್ರಕಾಶ್ ರಾಜ್ ಟ್ರೋಲ್ಗೂ ಒಳಗಾಗಿದ್ದರು.
ಆದರೆ ಆ ಟೀಕೆಗಳಿಗೆಲ್ಲ ಕ್ಯಾರೇ ಎನ್ನದ ಪ್ರಕಾಶ್ ರಾಜ್ ನಿನ್ನೆ ಮತ್ತೊಂದು ಎಕ್ಸ್ ಮಾಡಿ ಟೀಕಿಸಿದ್ದವರನ್ನು ಕೆಣಕಿದ್ದರು. ‘ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುವುದು. ನಾನು ನಮ್ಮ ಕೇರಳದ ಚಾಯ್ವಾಲಾರನ್ನು ಸಂಭ್ರಮಿಸುವ ಆರ್ಮ್ಸ್ಟ್ರಾಂಗ್ ಕಾಲದ ಜೋಕನ್ನು ಹೇಳಿದ್ದೆ. ಟ್ರೋಲಿಗರಿಗೆ ಕಂಡ ಚಾಯ್ವಾಲಾ ಯಾರು?’ ಎಂದು ಪ್ರಶ್ನಿಸಿದ್ದ ಪ್ರಕಾಶ್ ರಾಜ್, ‘ನಿಮಗೆ ಜೋಕ್ ಅರ್ಥ ಆಗಲಿಲ್ಲವೆಂದರೆ ಜೋಕು ನಿಮ್ಮ ಬಗ್ಗೆಯೇ.. ಬೆಳೆಯಿರಿ’ ಎಂದು ಟೀಕಿಸಿದವರಿಗೆ ಹೇಳಿದ್ದರು.
ಅದಾದ ಮೇಲೆ ಪ್ರಕಾಶ್ ರಾಜ್ ವಿರುದ್ಧ ಅಸಹನೆ ಮತ್ತಷ್ಟು ಹೆಚ್ಚಾಗಿದ್ದು, ಟ್ರೋಲಿಗರು ಇನ್ನಷ್ಟು ಟ್ರೋಲ್ ಮಾಡಲಾರಂಭಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಪ್ರಕಾಶ್ ರಾಜ್ ಇನ್ನೊಂದು ಎಕ್ಸ್ ಮಾಡಿದ್ದಾರೆ. ಅನ್ಅಕಾಡೆಮಿ ಟ್ರೋಲ್ಸ್ ಎಂದು ಉಲ್ಲೇಖಿಸಿ ಎಕ್ಸ್ ಮಾಡಿರುವ ಪ್ರಕಾಶ್ ರಾಜ್, ನಿಮಗೆ ಗೊತ್ತಿರುವುದು ಒಂದೇ ಚಾಯ್ವಾಲಾ. 1960ರಿಂದ ಚಾಲ್ತಿಯಲ್ಲಿರುವ ನಮ್ಮ ಮಲಯಾಳಿ ಚಾಯ್ವಾಲಾಗಳ ಕುರಿತ ಹೆಮ್ಮೆಯ ಈ ಸಂಗತಿ ನೋಡಿ ಎಂದಿರುವ ಅವರು ಆ ಕುರಿತ ಬರಹದ ಲಿಂಕ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಟ್ರೋಲಿಗರು ಓದಿ ವಿಷಯ ತಿಳಿದುಕೊಳ್ಳಿ ಎಂದೂ ಮತ್ತೆ ಕಾಲೆಳೆದಿದ್ದಾರೆ.