ಚಂದ್ರಯಾನ ಯಶಸ್ವಿಯಾದ ಕ್ಷಣದಲ್ಲಿ ಇಸ್ರೋ ಅಧಿಕಾರಿಗಳು 
ನ್ಯೂಸ್

ಯಶಸ್ವಿಯಾದ ಚಂದ್ರಯಾನ-3 ಲ್ಯಾಂಡರ್; ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಭಾರತ

ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಬುಧವಾರ ಸಂಜೆ ಚಂದ್ರನ ಮೇಲ್ಮೈಗೆ ಇಳಿಯುವಲ್ಲಿ ಯಶಸ್ವಿಯಾಗಿದ್ದು, ಚಂದ್ರನ ಅಜ್ಞಾತ ಪ್ರದೇಶವಾದ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮುವ ಮೂಲಕ ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ.

ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಒಳಗೊಂಡಿರುವ ನೌಕೆ ಬುಧವಾರ ಸಂಜೆ 6:04ಕ್ಕೆ ಚಂದ್ರನ ಮೇಲೆ ಸ್‌ಟಾ ಲ್ಯಾಂಡಿಂಗ್ ನಡೆಸಿದ್ದು, ಈ ಮೂಲಕ ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್​​ ಲ್ಯಾಂಡಿಂಗ್ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಚೀನಾ, ರಷ್ಯಾ, ಅಮೆರಿಕ ಈಗಾಗಲೇ ಈ ಯತ್ನದಲ್ಲಿ ಯಶಸ್ಸು ಕಂಡಿವೆ.

600 ಕೋಟಿ ರೂ. ವೆಚ್ಚದ ಚಂದ್ರಯಾನ-3 ನೌಕೆಯನ್ನು ಜುಲೈ 14ರಂದು ಉಡಾವಣೆ ಮಾಡಲಾಗಿತ್ತು. 41 ದಿನಗಳ ಪ್ರಯಾಣದ ನಂತರ ಅದು ಚಂದ್ರನ ಕಕ್ಷೆ ತಲುಪಿದೆ.

ಸಾಫ್ಟ್​ ಲ್ಯಾಂಡಿಂಗ್ ಹೇಗೆ?

ಅಂದಾಜು 6.8 ಕಿಮೀ ಎತ್ತರದ ಕಕ್ಷೆ ತಲುಪಿದಾಗ ಎರಡು ಎಂಜಿನ್‌ಗಳನ್ನು ಮಾತ್ರ ಬಳಸಲಾಗಿದ್ದು. ಇನ್ನೆರಡು ಎಂಜಿನ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಲ್ಯಾಂಡರ್ ಇಳಿಯುತ್ತಿದ್ದ ಸಂದರ್ಭ ರಿವರ್ಸ್ ಥ್ರಸ್ಟ್ ಬಳಕೆ ಮಾಡಲಾಗಿದೆ.

ಇದಕ್ಕೂ ಮೊದಲು ಸುಮಾರು 150-100 ಮೀಟರ್ ಎತ್ತರದಲ್ಲಿದ್ದಾಗಲೇ ಲ್ಯಾಂಡರ್ ತನ್ನ ಸಂವೇದಕಗಳು ಮತ್ತು ಕ್ಯಾಮರಾಗಳನ್ನು ಬಳಸಿ, ಯಾವುದೇ ಅಡೆತಡೆಗಳಿವೆಯೇ ಎಂದು ಪರಿಶೀಲಿಸಿದ್ದು, ಬಳಿಕ ಮೃದುವಾಗಿ ಲ್ಯಾಂಡಿಂಗ್ ಮಾಡಿದೆ. ಪ್ರತಿ ಸೆಕೆಂಡಿಗೆ ಸುಮಾರು 1.68 ಕಿ.ಮೀ ಪ್ರಾರಂಭಿಕ ವೇಗವನ್ನು ಅಂತಿಮವಾಗಿ ಪ್ರತಿ ಸೆಕೆಂಡ್‌ಗೆ 2 ಮೀಟರ್‌ಗೆ ಇಳಿಸಲಾಗಿತ್ತು.

ರೋವರ್ ಕಾರ್ಯ

ಲ್ಯಾಂಡರ್ ಒಳಗಿರುವ ರೋವರ್ ಚಂದ್ರನ ಮೇಲ್ಮೈಗೆ ಇಳಿದಿದ್ದು, ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳನ್ನು ಅಧ್ಯಯನ ನಡೆಸಲಿದೆ. ಚಂದ್ರನ ಒಂದು ದಿನ (ಭೂಮಿಯ 14 ದಿನಗಳು) ಕಾಲ ಇದು ಕೆಲಸ ಮಾಡಲಿದೆ. ಚಂದ್ರನ ಮೇಲ್ಮೈಯ ಸ್ಥಳದಲ್ಲಿ ರಾಸಾಯನಿಕ ವಿಶ್ಲೇಷಣೆಯನ್ನು ಇದು ಕೈಗೊಳ್ಳಲಿದೆ. ಲ್ಯಾಂಡರ್ ಮತ್ತು ರೋವರ್‌ಗಳು ಚಂದ್ರನ ಮೇಲ್ಮೈಯಲ್ಲಿ ವಿವಿಧ ಪ್ರಯೋಗಗಳನ್ನು ಕೈಗೊಳ್ಳಲು ವೈಜ್ಞಾನಿಕ ಪೇಲೋಡ್‌ಗಳನ್ನು ಹೊಂದಿವೆ.

ಮೈನಸ್ 180 ಡಿಗ್ರಿ ಸೆಲ್ಸಿಯಸ್!

ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯನು ಮುಳುಗಿದ ಕ್ಷಣದಲ್ಲಿ ಸಂಪೂರ್ಣ ಕತ್ತಲೆ ಆವರಿಸಲಿದೆ. ತಾಪಮಾನವು ಮೈನಸ್ 180 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುತ್ತದೆ. ಆದ್ದರಿಂದ ಇಲ್ಲಿ ಯಾವುದೇ ಜೀವಿಗಳು ಬದುಕುವುದು ಅಸಾಧ್ಯ. ಚಂದ್ರನ ಧ್ರುವೀಯ ಪ್ರದೇಶಗಳು ಅಲ್ಲಿನ ಪರಿಸರದ ಕಾರಣ ವಿಭಿನ್ನವಾದ ಪ್ರದೇಶಗಳಾಗಿವೆ. ಚಂದ್ರನನ್ನು ತಲುಪಿದ ಹಿಂದಿನ ಎಲ್ಲಾ ಬಾಹ್ಯಾಕಾಶ ನೌಕೆಗಳು ಸಮಭಾಜಕ ಪ್ರದೇಶದಲ್ಲಿ, ಸಮಭಾಜಕದ ಉತ್ತರ ಭಾಗದಲ್ಲಿ ಇಳಿದಿದ್ದವು. ಈ ಕಾರಣಕ್ಕೆ ಇಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಸುತ್ತ ಶಾಶ್ವತವಾಗಿ ನೆರಳಿನ ಪ್ರದೇಶ ಇದೆ. ಇಲ್ಲಿ ನೀರಿನ ಅಂಶ ಇರುವ ಸಾಧ್ಯತೆಯಿದೆ.

ಏನೇನು ಅಧ್ಯಯನ?

ನೌಕೆಯು ಹಲವು ವೈಜ್ಞಾನಿಕ ಪೇಲೋಡ್‌ಗಳನ್ನು ಹೊಂದಿದೆ. ಇದು ಚಂದ್ರನ ಮೇಲ್ಮೈ ಪ್ಲಾಸ್ಮಾ ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳ ಸಾಂದ್ರತೆ, ಅದರ ಬದಲಾವಣೆಗಳನ್ನು ಅಳೆಯಲು ನೆರವಾಗುತ್ತದೆ. ಭೌತಿಕ ಪ್ರಯೋಗ, ಧ್ರುವ ಪ್ರದೇಶದ ಬಳಿ ಚಂದ್ರನ ಮೇಲ್ಮೈಯ ಉಷ್ಣ ಗುಣಲಕ್ಷಣಗಳ ಮಾಪನ, ಚಂದ್ರನ ಭೂಕಂಪನ ಚಟುವಟಿಕೆ, ಅಲ್ಲಿನ ಖನಿಜ ಸಂಯೋಜನೆ, ಚಂದ್ರನ ಹೊರಪದರ ರಚನೆ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಚಂದ್ರನ ಮಣ್ಣು ಮತ್ತು ಬಂಡೆಗಳ ಧಾತುರೂಪದ ಸಂಯೋಜನೆಯನ್ನು ನಿರ್ಧರಿಸುತ್ತದೆ.

ಚಂದ್ರಯಾನದ ಹಾದಿ

* ಜುಲೈ 14 - ಉಡಾವಣೆ

* ಆಗಸ್ಟ್ 5 - ಚಂದ್ರನ ಕಕ್ಷೆಗೆ ಪ್ರವೇಶ

* ಆಗಸ್ಟ್ 17 - ಲ್ಯಾಂಡರ್ ಮಾಡ್ಯೂಲ್ ಬೇರ್ಪಡೆಯಾಗುವ ಪ್ರಕ್ರಿಯೆ ಯಶಸ್ವಿ

* ಆಗಸ್ಟ್ 6, 9, 14 ಮತ್ತು 16 - ಉಪಗ್ರಹದ ಕಕ್ಷೆ ಬದಲಾವಣೆ

* ಹಂತ-ಹಂತವಾಗಿ ಚಂದ್ರನ ಹತ್ತಿರಕ್ಕೆ ಬಂದ ನೌಕೆ

* ಆಗಸ್ಟ್ 23 - ಯಶಸ್ವಿಯಾಗಿ ಲ್ಯಾಂಡಿಂಗ್ ನಡೆಸಿದ ಲ್ಯಾಂಡರ್

*1959ರಲ್ಲಿ ಜಾಗತಿಕವಾಗಿ ಮೊದಲ ಬಾರಿ ರಷ್ಯಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿತ್ತು.

*1966ರಲ್ಲಿ ಅಮೆರಿಕ ಕೂಡ ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿದೆ

*2013ರಲ್ಲಿ ಚೀನಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿತ್ತು.

*600 ಕೋಟಿ ರೂ.: ಚಂದ್ರಯಾನ-3 ಕೈಗೊಳ್ಳಲು ಇಸ್ರೋಗೆ ತಗುಲಿದ ವೆಚ್ಚ

*40 ದಿನ: ಒಟ್ಟು ಅಂತರಿಕ್ಷದಲ್ಲಿ ಪ್ರಯಾಣಿಸಿದ ನೌಕೆ

*3.84 ಲಕ್ಷ: ಕಿ.ಮೀ ಕ್ರಮಿಸಿದ ದೂರ