ನ್ಯೂಸ್

Chandrayaan-3: ಚಂದ್ರನ ಅಂಗಳಕ್ಕೆ ಇಳಿಯಲು ಇನ್ನು 163 ಕಿ.ಮೀ ದೂರವಷ್ಟೇ! ಐತಿಹಾಸಿಕ ಕ್ಷಣಕ್ಕೆ ದಿನಗಣನೆ

ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ ಯೋಜನೆ ಚಂದ್ರಯಾನ 3 ನೌಕೆಯು ಚಂದ್ರನ ಕಡೆಗೆ ತನ್ನ ಪ್ರಯಾಣವನ್ನು ಮುಂದುವರಿಸಿದೆ. ಆಗಸ್ಟ್​ 15ರ ಮಂಗಳವಾರ ಬಾಹ್ಯಾಕಾಶ ನೌಕೆ ಮಹತ್ವದ ಫೈರಿಂಗ್​ ಆಪರೇಷನ್​ ಅನ್ನು ಯಶಸ್ವಿಯಾಗಿ ಮುಗಿಸಿದ್ದು, ನೌಕೆಯನ್ನು ಚಂದ್ರನ ಸುತ್ತ 153 ಕಿ.ಮೀ. x 163 ಕಿ.ಮೀ. ಕಕ್ಷೆಯಲ್ಲಿ ಇರಿಸಿದೆ. ಇದು ಅಂತಿಮಘಟ್ಟವಾಗಿದ್ದು, ಚಂದ್ರನ ಅಂಗಳಕ್ಕೆ ಇಳಿಯಲು ಇನ್ನೊಂದು ಹೆಜ್ಜೆ ಬಾಕಿ ಇದೆ.

163 ಕಿ.ಮೀ. ದೂರ ಮಾತ್ರ ಬಾಕಿ

ಆಗಸ್ಟ್​ 1ರಂದು ಭೂಕಕ್ಷೆಯನ್ನು ತೊರೆದ ಚಂದ್ರಯಾನ ನೌಕೆ, ಆಗಸ್ಟ್​ 5ರಂದು ಚಂದ್ರನ ಕಕ್ಷೆಗೆ ಪ್ರವೇಶ ಪಡೆಯಿತು. ಅಂದಿನಿಂದ ಇಸ್ರೋ ಆರ್ಬಿಟ್​ ರಿಡಕ್ಷನ್​ ಮಾನ್ಯುವರ್ಸ್​ ಮಾಡುತ್ತಿದ್ದು, ನೌಕೆಯ ಅಂತರವನ್ನು ಕಡಿತಗೊಳಿಸುತ್ತಿದೆ. ಇತ್ತೀಚೆಗಷ್ಟೇ ಮತ್ತೊಂದು ಹಂತದ ರಿಡಕ್ಷನ್​ ಮಾನ್ಯುವರ್ಸ್​ ಅನ್ನು ಯಶಸ್ವಿಯಾಗಿ ಮುಗಿಸಿತು. ಆಗಸ್ಟ್​ 15ರಂದು ಮತ್ತೊಂದು ಹಂತದ ಪ್ರಕ್ರಿಯೆಯು ಮುಗಿಸಿದ್ದು, ಚಂದ್ರನ ಅಂಗಳಕ್ಕೆ ಇಳಿಯಲು ಇನ್ನೂ 163 ಕಿ.ಮೀ. ದೂರ ಮಾತ್ರ ಬಾಕಿ ಇದೆ.

ನಾಳೆ ಲ್ಯಾಂಡರ್​ ಬೇರ್ಪಡೆ

ಚಂದ್ರಯಾನ-3 ನೌಕೆಯನ್ನು ಜುಲೈ 14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟದ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಈ ಬಾಹ್ಯಾಕಾಶ ನೌಕೆಯು ಪ್ರೊಪಲ್ಸನ್​ ಮಾಡ್ಯೂಲ್​ ಮತ್ತು ಒಂದು ಲ್ಯಾಂಡರ್​ ಮಾಡ್ಯೂಲ್​ ಒಳಗೊಂಡಿದೆ. ತನ್ನ ಪ್ರಯಾಣದ ಮಹತ್ವದ ಘಟ್ಟಕ್ಕಾಗಿ ಇದೀಗ ನೌಕೆಯು ಸಿದ್ಧತೆ ನಡೆಸುತ್ತಿದೆ. ಆಗಸ್ಟ್​ 17ರಂದು ಲ್ಯಾಂಡರ್​ ಮಾಡ್ಯೂಲ್​ ಅನ್ನು ಪ್ರೊಪಲ್ಸನ್​ ಮಾಡ್ಯೂಲ್​ನಿಂದ ಬೇರ್ಪಡಿಸಲು ಸಮಯ ನಿಗದಿಯಾಗಿದೆ.

ಪ್ರೊಪಲ್ಸನ್​ ಮಾಡ್ಯೂಲ್​ನಲ್ಲಿ ಏನಿದೆ?

ಪ್ರೊಪಲ್ಸನ್​ ಮಾಡ್ಯೂಲ್​ ಪೆಟ್ಟಿಗೆಯಂತಹ ರಚನೆಯಾಗಿದ್ದು, ದೊಡ್ಡ ಸೌರ ಫಲಕ ಮತ್ತು ಅದರ ಮೇಲೆ ಒಂದು ಸಿಲಿಂಡರ್ ಇದೆ. ಬಾಹ್ಯಾಕಾಶ ನೌಕೆಯು 100 ಕಿಮೀ ಚಂದ್ರನ ಕಕ್ಷೆಯನ್ನು ತಲುಪುವವರೆಗೆ ಲ್ಯಾಂಡರ್ ಮತ್ತು ರೋವರ್ ಸಂರಚನೆಯನ್ನು ಸಾಗಿಸುವ ಜವಾಬ್ದಾರಿಯನ್ನು ಇದು ಹೊಂದಿದೆ. ಲ್ಯಾಂಡರ್​ನಿಂದ ಬೇರ್ಪಟ್ಟ ಬಳಿಕವೂ ಪ್ರೊಪಲ್ಸನ್​ ಮಾಡ್ಯೂಲ್​, ಸಂವಹನ ಉಪಗ್ರಹವಾಗಿ ಕೆಲಸ ಮಾಡಲಿದೆ.

ಲ್ಯಾಂಡರ್​ ಮಾಡ್ಯೂಲ್​ನಲ್ಲಿ ಏನಿದೆ?

ಇದೇ ಸಂದರ್ಭದಲ್ಲಿ ವಿಕ್ರಮ್​ ಹೆಸರಿನ ಲ್ಯಾಂಡರ್​ ಮಾಡ್ಯೂಲ್​, ಚಂದ್ರನ ಮೇಲ್ಮೈ ಕಡೆಗೆ ತನ್ನ ಪ್ರಯಾಣವನ್ನು ಮುಂದುವರಿಸಲಿದೆ. ನಾಲ್ಕು ಲ್ಯಾಂಡಿಂಗ್​ ಲೆಗ್ಸ್​, ತಲಾ 800 ನ್ಯೂಟನ್‌ಗಳ ನಾಲ್ಕು ಲ್ಯಾಂಡಿಂಗ್ ಥ್ರಸ್ಟರ್‌ಗಳನ್ನು ವಿಕ್ರಮ್​ ಲ್ಯಾಂಡರ್​ ಹೊಂದಿದ್ದು, ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್​ ಮಾಡುವ ರೀತಿಯಲ್ಲಿ ಲ್ಯಾಂಡರ್​ ಅನ್ನು ಸಿದ್ಧಪಡಿಸಲಾಗಿದೆ. ವಿಕ್ರಮ್​ ಲ್ಯಾಂಡರ್​ ತನ್ನೊಳಗೆ ಪ್ರಗ್ಯಾನ್ ಹೆಸರಿನ ರೋವರ್ ಅನ್ನು ಹೊತ್ತೊಯ್ದಿದ್ದು, ಯಶಸ್ವಿ ಲ್ಯಾಂಡಿಂಗ್ ಆದ ನಂತರ ಅದನ್ನು ಚಂದ್ರನ ಮೇಲೆ ನಿಯೋಜಿಸಲಾಗುತ್ತದೆ.

ಇಸ್ರೋ ಹೇಳಿದ್ದೇನು?

ಇಸ್ರೋ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, ಈವರೆಗೂ ಯೋಜನೆಯಂತೆಯೇ ಚಂದ್ರಯಾನ-3 ನೌಕೆ ಸರಾಗವಾಗಿ ಸಾಗುತ್ತಿದೆ ಎಂದು ಇಸ್ರೋ ತಿಳಿಸಿದೆ. ಆದರೆ ಈ ಮಿಷನ್​ ಪೂರ್ಣಗೊಳ್ಳಬೇಕಾದರೆ, ಚಂದ್ರನ ಮೇಲೆ ಮೃದುವಾಗಿ ಲ್ಯಾಂಡ್​ ಆಗಬೇಕಿರುವುದು ತುಂಬಾ ಮುಖ್ಯ. ಈ ತಿಂಗಳ 23ರಂದು ಸಾಫ್ಟ್​ ಲ್ಯಾಂಡಿಂಗ್​ಗೆ ಪ್ರಯತ್ನ ಮಾಡುತ್ತೇವೆ ಎಂದು ಇಸ್ರೋ ತಿಳಿಸಿದೆ.

ಚಿಂತಿಸಬೇಕಿಲ್ಲ 

ಚಂದ್ರಯಾನ-2 ಮಿಷನ್​ ಲ್ಯಾಂಡಿಂಗ್​ ವೇಳೆಯೇ ವಿಫಲವಾಗಿತು. ಲ್ಯಾಂಡರ್​ ಇನ್ನೇನು ಚಂದ್ರನ ಮೇಲೆ ಇಳಿಯಬೇಕು ಅನ್ನುವಷ್ಟರಲ್ಲಿ ಪತನಗೊಂಡು ಸಂಪರ್ಕ ಕಡಿದುಕೊಂಡಿತು. ಇದರಿಂದ ಚಂದ್ರಯಾನ-2 ಯೋಜನೆ ವಿಫಲವಾಯಿತು. ಇದರಿಂದ ಪಾಠ ಕಲಿತಿರುವ ಇಸ್ರೋ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಈ ಬಾರಿ ಯಾವುದೇ ತೊಂದರೆ ಇರುವುದಿಲ್ಲ ಎಂಬ ಭರವಸೆ ವ್ಯಕ್ತಪಡಿಸಿದೆ. ನಿರ್ಣಾಯಕ ಹಂತದಲ್ಲೂ ನೌಕೆಯ ಸೆನ್ಸಾರ್​ ಮತ್ತು ಇಂಜಿನ್​ ವಿಫಲವಾದರೂ ಚಿಂತಿಸಬೇಕಾಗಿಲ್ಲ. ಏಕೆಂದರೆ ಲ್ಯಾಂಡಿಂಗ್ ಯಶಸ್ವಿಯಾಗುವ ರೀತಿಯಲ್ಲಿ ಹೊಸ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ.

ಒಂದು ವೇಳೆ ಚಂದ್ರನ ಮೇಲೆ ಭಾರತ ಸಾಫ್ಟ್​ ಲ್ಯಾಂಡ್​ ಮಾಡಿದ್ದಲ್ಲಿ, ಅಮೆರಿಕ, ಚೀನಾ, ರಷ್ಯಾ ಮತ್ತು ಫ್ರಾನ್ಸ್​ ಸಾಲಿಗೆ ಭಾರತವೂ ಸೇರಿಕೊಳ್ಳಲಿದೆ. (ಏಜೆನ್ಸೀಸ್​)