ಬೆಂಗಳೂರು: ರ್‍ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ವಿಚಾರ ಅಭಿಮಾನಿಗಳಿಗೆ ಸಿಡಿಲು ಬಡಿದಂತಾಗಿದ್ದು, ಈ ಜೋಡಿಯು ಪರಸ್ಪರ ಒಪ್ಪಿಗೆ ಸೂಚಿಸಿ ವಿಚ್ಛೇದನ ಪಡೆದಿದ್ದಾರೆ. ರೀಲ್ಸ್ ಮಾಡಿಕೊಂಡು ರಿಯಾಲಿಟಿ ಶೋ ಹಾಗೂ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ಈ ಜೋಡಿಯು ತುಂಬಾ ಅನ್ಯೋನ್ಯವಾಗಿದ್ದರು. ಆದರೆ, ವಿಚ್ಛೇದನದ ಈ ನಿರ್ಧಾರದ ಹಿಂದೆ ಏನು ಕಾರಣ ಎಂದು ಈವರೆಗೂ ತಿಳಿದು ಬಂದಿಲ್ಲ. ಆದರೆ. ಇದೀಗ ಇವರಿಬ್ಬರ ಬಗ್ಗೆ ಮತ್ತೊಂದು ಹೊಸ ಸುದ್ದಿ ಕೇಳಿ ಬಂದಿದ್ದು, ಈ ವಿಚಾರ ಸಾಕಷ್ಟು ಸದ್ದು ಮಾಡತೊಡಗಿದೆ.
ಒಮ್ಮತದಿಂದ ಬೇರೆಯಾಗಿರುವ ಚಂದನ್ ಮತ್ತು ನಿವೇದಿತಾ ಕ್ಯಾಂಡಿ ಕ್ರಶ್ ಅನ್ನುವ ಸಿನಿಮಾದಲ್ಲಿ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ. ಪುನೀತ್ ಅವರ ಕಥೆ ಚಿತ್ರಕಥೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕ್ಯಾಂಡಿ ಕ್ರಷ್ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇನ್ನು 8 ದಿನಗಳ ಚಿತ್ರೀಕರಣ ಬಾಕಿ ಉಳಿದಿದೆ. ಆದರೆ ಈಗ ಚಿತ್ರತಂಡಕ್ಕೆ ಇವರಿಬ್ಬರ ವಿಚ್ಚೇದನ ಶಾಕಿಂಗ್ ಸಮಾಚಾರದ ಜೊತೆಗೆ ಮತ್ತೊಂದು ಸಂಕಷ್ಟ ಕೂಡ ಎದುರಾಗಿದೆ.
ಕ್ಯಾಂಡಿ ಕ್ರಶ್ ಚಿತ್ರದ ಒಟ್ಟು 8 ದಿನಗಳ ಚಿತ್ರೀಕರಣ ಬಾಕಿ ಇದ್ದು, ಇದರಲ್ಲಿ 4 ದಿನ ಚಂದನ್-ನಿವೇದಿತಾ ರೋಮ್ಯಾಂಟಿಕ್ ಸೀನ್ ನಡೆಯಲಿದೆಯಂತೆ. ಈ ತಿಂಗಳ 14ರಿಂದ ಶೂಟಿಂಗ್ ನಡೆಸಲು ದಿನ ನಿಗದಿ ಮಾಡಿರುವುದರಿಂದ ಚಿತ್ರತಂಡಕ್ಕೆ ಈಗ ಬೇರೆಯಾಗಿರುವ ಚಂದನ್ ಮತ್ತು ನಿವೇದಿತಾ ಮತ್ತೆ ಒಟ್ಟಿಗೆ ನಟಿಸುತ್ತಾರೋ ಇಲ್ಲವೂ ಎಂಬ ತಲೆ ಬಿಸಿ ಆರಂಭವಾಗಿದೆ. ಇದಲ್ಲದೆ ಟೈಟಲ್ ಬದಲಿಸುವಂತೆ ಚಿತ್ರತಂಡಕ್ಕೆ ಗೇಮಿಂಗ್ ಕಂಪನಿ ಕಡೆಯಿಂದ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ನಿವೇದಿತಾ ಗೌಡ ಸಿನಿಮಾದ ನಿರ್ದೇಶಕ ಪುನೀತ್‌ಗೆ ಕರೆ ಮಾಡಿ ಸಿನಿಮಾದಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ. ನಿಮ್ಮ ಪ್ಲ್ಯಾನ್ ಪ್ರಕಾರವೇ, ಶೂಟಿಂಗ್‌ನಲ್ಲಿ ಭಾಗವಹಿಸುತ್ತೇವೆ ಎಂದಿದ್ದಾರಂತೆ. ಟೆನ್ಷನ್ ಆಗುವಂತಹದ್ದು ಏನಿಲ್ಲ. ಚೆನ್ನಾಗಿಯೇ ಇದ್ದೇವೆ. ಇಬ್ಬರ ಒಪ್ಪಿಗೆಯ ಮೇರೆಗೆ ಈ ನಿರ್ಧಾರಕ್ಕೆ ಬಂದಿದ್ದೇವೆ. ಶೂಟಿಂಗ್‌ನಲ್ಲಿ ಏನೂ ಸಮಸ್ಯೆ ಆಗಲ್ಲ. ನೀವು ಶೆಡ್ಯೂಲ್ ಪ್ಲ್ಯಾನ್ ಮಾಡಿಕೊಳ್ಳಿ ಎಂದು ನಿವೇದಿತಾ ನಿರ್ದೇಶಕರಿಗೆ ಹೇಳಿದ್ದಾರೆಂದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.