Chanakya Niti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ನೀತಿಯು ಒಬ್ಬ ವ್ಯಕ್ತಿಯನ್ನು ಯಶಸ್ವಿಯಾಗಲು ಪ್ರೇರೇಪಿಸುತ್ತದೆ.
ಚಾಣಕ್ಯ ತತ್ವಗಳನ್ನು ಒಳಗೊಂಡಿರುವ ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಬರೆಯಲಾಗಿದೆ. ಸಂತೋಷದ ಜೀವನದ ಅನೇಕ ರಹಸ್ಯಗಳನ್ನು ಆ ಪುಸ್ತಕದಲ್ಲಿ ತಿಳಿಸಲಾಗಿದೆ. ಅಲ್ಲದೆ, ಮನುಷ್ಯನಾಗಿ ಜನ್ಮ ತಾಳಿದ ವ್ಯಕ್ತಿ ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಅನುಸರಿಸಬೇಕಾದ ಧರ್ಮ, ಕರ್ಮ, ಪಾಪ ಹಾಗೂ ಪುಣ್ಯಗಳ ಬಗ್ಗೆ ಚಾಣಕ್ಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಮನುಷ್ಯರಾಗಿ ಹುಟ್ಟಿದ ನಾವು ನಮ್ಮ ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಭಾವಿಸುತ್ತೇವೆ. ಅದಕ್ಕೆ ದಾರಿಯನ್ನು ಚಾಣಕ್ಯ ಹಾಕಿಕೊಟ್ಟಿದ್ದಾರೆ. ಆ ದಾರಿಯಲ್ಲಿ ನಡೆದರೆ ಯಶಸ್ಸು ಖಂಡಿತವಾಗಿ ಸಿಗುತ್ತದೆ.
ಅಂದಹಾಗೆ ಖುಷಿಯಾಗಲಿ ಅಥವಾ ದುಃಖವಾಗಲಿ ಅದನ್ನು ನಮ್ಮಲ್ಲೇ ಇಟ್ಟುಕೊಳ್ಳುವುದಕ್ಕಿಂತ ಬೇರೆಯವರ ಜತೆ ಹಂಚಿಕೊಂಡರೆ ಸಂತೋಷ ಇಮ್ಮಡಿಯಾಗುತ್ತದೆ ಮತ್ತು ನೋವು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಹೌದು, ಯಾವುದೇ ವಿಚಾರದಲ್ಲಿ ತುಂಬಾ ಸಂಕಟ ಅನುಭವಿಸುತ್ತಿದ್ದರೆ ಅದನ್ನು ನಾವು ಹೆಚ್ಚು ಇಷ್ಟಪಡುವವರಿಗೆ ಹೇಳಬೇಕು ಅನ್ನಿಸುತ್ತದೆ. ಅವರು ನಮ್ಮ ಸಮಸ್ಯೆ ಬಗೆಹರಿಸುತ್ತಾರೆ ಎಂದಲ್ಲ ಆದರೆ, ನಮ್ಮ ಹೃದಯದ ಭಾರ ಸ್ವಲ್ಪವಾದರೂ ಕಡಿಮೆಯಾಗುತ್ತದೆಂಬ ಭಾವನೆ. ಆದರೆ, ಕೆಲವೊಬ್ಬರ ಜೊತೆ ನಿಮ್ಮ ನೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಲೇಬಾರದು ಎನ್ನುತ್ತಾರೆ ಚಾಣುಕ್ಯ. ಹಾಗಾದರೆ ಅವರು ಯಾರು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಈ ಜಗತ್ತಿನಲ್ಲಿ ಸ್ನೇಹಿತರಿಲ್ಲದವರು ಯಾರೂ ಇಲ್ಲ. ಆದರೆ ನಮ್ಮಲ್ಲಿ ಕೆಲವರು ಮಾತ್ರ ಆತ್ಮೀಯರಾಗುತ್ತಾರೆ. ಸ್ನೇಹಿತರ ದೊಡ್ಡ ಪಟ್ಟಿಯೇ ನಿಮ್ಮ ಬಳಿ ಇರುತ್ತದೆ. ಅವರಲ್ಲಿ ಒಬ್ಬರು ಅಥವಾ ಇಬ್ಬರು ಮಾತ್ರ ನಿಮಗೆ ತುಂಬಾ ಹತ್ತಿರವಾಗಿರುತ್ತಾರೆ ಮತ್ತು ನಿಮ್ಮ ಆಲೋಚನೆಗಳಿಗೆ ಹೊಂದಿಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ. ಆದರೆ, ನಿಮ್ಮೊಂದಿಗೆ ಆತ್ಮೀಯವಾಗಿ ಮಾತನಾಡುವ ಪ್ರತಿಯೊಬ್ಬರೂ ನಿಮ್ಮ ಯೋಗಕ್ಷೇಮವನ್ನು ಬಯಸುತ್ತಾರೆ ಮತ್ತು ಒಳ್ಳೆಯ ವ್ಯಕ್ತಿ ಎಂದು ನೀವು ಭಾವಿಸಬಾರದು. ಏಕೆಂದರೆ ಕೆಲವರ ಮನಸ್ಸಿನಲ್ಲಿ ಏನಿರುತ್ತದೆ ಎಂದು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಕೃತಕ ಸ್ನೇಹ ಅಂದರೆ, ಕೇವಲ ನಾಮಕಾವಸ್ತೆಗೆ ಸ್ನೇಹ ಮಾಡುವ ಜನರೊಂದಿಗೆ ಎಂದಿಗೂ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಡಿ. ಅಂತಹ ಜನರು ನಿಮ್ಮ ದುಃಖ ಅಥವಾ ರಹಸ್ಯಗಳನ್ನು ಇತರರಿಗೆ ಹೇಳಬಹುದು.
ಪ್ರತಿ ಕ್ಷಣವನ್ನು ಸಂತೋಷದಿಂದ ಬದುಕುವುದು ಜೀವನವನ್ನು ಸುಲಭಗೊಳಿಸುತ್ತದೆ. ಆದರೆ, ಎಲ್ಲವನ್ನೂ ಗೇಲಿ ಮಾಡುವವರನ್ನು ಎಂದಿಗೂ ನಂಬಬೇಡಿ. ಎಲ್ಲವನ್ನೂ ಗೇಲಿ ಮಾಡುವ ಜನರು ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು. ನೀವು ತುಂಬಾ ಭಾವುಕರಾಗಿ ನಿಮ್ಮ ವಿಚಾರಗಳನ್ನು ಗೇಲಿ ಮಾಡುವವರೊಂದಿಗೆ ಹಂಚಿಕೊಂಡರೆ ಅಂತಹವರು ನಿಮ್ಮ ನೋವನ್ನು ಇತರರಿಗೆ ತಿಳಿಸಿ ನಿಮ್ಮನ್ನು ಇನ್ನಷ್ಟು ಗೇಲಿ ಮಾಡುತ್ತಾರೆ. ಆದ್ದರಿಂದ, ಅವರ ಬಗ್ಗೆ ಎಚ್ಚರದಿಂದಿರಿ.
ಇನ್ನು ಕೆಲವರು ಎಲ್ಲದರಲ್ಲೂ ತಮ್ಮದೇಯಾದ ಲಾಭವನ್ನು ನೋಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ಲಕ್ಷಣ ಹೊಂದಿರುವ ಜನರು ಇತರರಿಗೆ ಹಾನಿ ಮಾಡುವುದನ್ನು ನಿಲ್ಲಿಸುವುದಿಲ್ಲ. ಕಾಲಾನಂತರದಲ್ಲಿ, ಅಂತಹ ಜನರು ತಮ್ಮ ಸ್ವಂತ ಲಾಭಕ್ಕಾಗಿ ನೀವು ಹೇಳುವ ಕೆಲವರು ನೋವಿನ ವಿಚಾರಗಳನ್ನು ಸಹ ಬಳಸಬಹುದು. ಆದ್ದರಿಂದ, ಎಲ್ಲವನ್ನು ಲಾಭಕ್ಕಾಗಿ ನೋಡುವ ಜನರೊಂದಿಗೆ ನಿಮ್ಮ ದುಃಖವನ್ನು ನೀವು ಎಂದಿಗೂ ಹಂಚಿಕೊಳ್ಳಬಾರದು.
ಕೆಲವರು ಯಾವಾಗಲೂ ಅಸುರಕ್ಷಿತ ಭಾವನೆ ಹೊಂದಿರುತ್ತಾರೆ. ಅಂತಹವರ ಬಳಿ ನಿಮ್ಮ ದುಃಖದ ಬಗ್ಗೆ ಹೇಳಿದರೆ ಅವರು ನಿಮ್ಮ ದುಃಖದಲ್ಲಿ ಸಂತೋಷವನ್ನು ಕಂಡುಕೊಳ್ಳಲು ಪ್ರಾರಂಭಿಸುತ್ತಾರೆ. ನಿಮ್ಮ ದುಃಖವನ್ನು ನಕಾರಾತ್ಮಕ ರೀತಿಯಲ್ಲಿ ಪ್ರಚಾರ ಮಾಡಲು ಹಿಂಜರಿಯುವುದಿಲ್ಲ.
ಇನ್ನು ಈ ಮೇಲೆ ಹೇಳಿದಂತಹ ಜನರನ್ನು ಹುಡುಕುವುದು ಕಷ್ಟದ ಕೆಲಸವಲ್ಲ. ನಮಗೆ ಎಲ್ಲವೂ ಗೊತ್ತು. ಆದರೆ, ನಾವು ಮಾಡುವ ತಪ್ಪೆಂದರೆ ಅವರನ್ನು ಲಘುವಾಗಿ ಪರಿಗಣಿಸುವುದು. ಹೀಗಾಗಿ ಇಂತಹ ವ್ಯಕ್ತಿಗಳೆಂದು ಗೊತ್ತಾದ ಕೂಡಲೇ ಅವರಿಂದ ದೂರವಿರುವುದು ಒಳ್ಳೆಯದು.
ವಿಶೇಷ ಸೂಚನೆ: ಮೇಲಿನ ಮಾಹಿತಿ ಸಾಮಾನ್ಯ ಸಾರ್ವಜನಿಕ ಮಾಹಿತಿಯನ್ನು ಆಧರಿಸಿದೆ. ವಿಜಯವಾಣಿ.ನೆಟ್ ಅದರ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ. ಯಾವುದೇ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೊದಲು, ಸಂಬಂಧಿತ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.