ನ್ಯೂಸ್

'ರಾಮಮಂದಿರ ನಿರ್ಮಾಣ ಚಳವಳಿ ನಮ್ಮ ಅಜೆಂಡಾ ಆಗಿತ್ತು, ಆದರೆ ಕೃಷ್ಣ ಜನ್ಮಭೂಮಿ...'

ನವದೆಹಲಿ: ಅಯೋಧ್ಯೆ ಭೂವಿವಾದಕ್ಕೆ ಸಂಬಂಧಪಟ್ಟಂತೆ ರಾಮಮಂದಿರದ ಪರ ತೀರ್ಪು ಬಂದು, ಅಲ್ಲಿ ದೇಗುಲ ನಿರ್ಮಾಣ ಕಾರ್ಯ ನಡೆಯುತ್ತಿರುವ ಬೆನ್ನಲ್ಲೇ ಇತ್ತ ಮಥುರಾ ಕೃಷ್ಣಜನ್ಮಭೂಮಿಯ ದೇವಾಲಯದ ಬಳಿ ಇರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕು ಎಂಬ ಕೂಗು ಹೆಚ್ಚಾಗಿದೆ. ಈ ಸಂಬಂಧ ಕೆಲವರು ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ಕೂಡ ವಿಚಾರಣೆಗೆ ಸ್ವೀಕೃತವಾಗಿದೆ.

ಹಾಗೇ ಮಥುರಾ ಕೃಷ್ಣ ಜನ್ಮಭೂಮಿಯ ಕಾತ್ರ ಕೇಶವ ದೇವ ದೇವಸ್ಥಾನದ 13 ಎಕರೆ ಪ್ರದೇಶದ ಒಳಗೆ ಇರುವ ಮಸೀದಿಯನ್ನು ತೆರವು ಮಾಡಬೇಕು ಎಂದು ಸಲ್ಲಿಕೆಯಾದ ಅರ್ಜಿಯಲ್ಲಿ ಕೇಂದ್ರ ಸರ್ಕಾರವಾಗಲಿ, ಬಿಜೆಪಿಯಾಗಲೀ ಭಾಗಿಯಾಗಿಲ್ಲ ಎಂದು ಕೇಂದ್ರ ಸಚಿವ ಅಮಿತ್​ ಷಾ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಷಾ, ಕೆಲವು ಸಂಘಟನೆಗಳು ಸ್ವಇಚ್ಛೆಯಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿವೆ ಹೊರತು ಸರ್ಕಾರದ ಭಾಗವಹಿಸುವಿಕೆ ಇಲ್ಲ ಎಂದು ತಿಳಿಸಿದ್ದಾರೆ.  ನಮ್ಮ ಪಕ್ಷವಾಗಲೀ, ಕೇಂದ್ರ ಸರ್ಕಾರವಾಗಿ ಮಥುರಾ ಕೃಷ್ಣಜನ್ಮಭೂಮಿ ವಿಚಾರದಲ್ಲಿ ಭಾಗಿಯಾಗಿಲ್ಲ. ಹಾಗಾಗಿ ಸಲ್ಲಿಕೆಯಾದ ಅರ್ಜಿಯ ಬಗ್ಗೆ ನಾನು ಮಾತನಾಡುವುದು ಸೂಕ್ತ ಎನ್ನಿಸುತ್ತಿಲ್ಲ ಎಂದು ಅಮಿತ್​ ಷಾ ಹೇಳಿದ್ದಾರೆ.

ರಾಮಜನ್ಮಭೂಮಿ, ರಾಮಮಂದಿರ ನಿರ್ಮಾಣ ಚಳವಳಿ ನಮ್ಮ ಪಕ್ಷದ ಪ್ರಮುಖ ಕಾರ್ಯಸೂಚಿಯಾಗಿತ್ತು. ಆದರೆ ಮಥುರಾ ಅರ್ಜಿ ನಾವು ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: VIDEO: ಆಗಸದಲ್ಲಿ ವಿಚಿತ್ರ ವಿದ್ಯಮಾನ- ಒಂದೇ ಬಾರಿ ಮೂರು ಸೂರ್ಯನ ಉದಯ!

17ನೇ ಶತಮಾನದ ಔರಂಗಜೇಬನ ಆಡಳಿತದಲ್ಲಿ ಕೃಷ್ಣ ದೇವಾಲಯದ ಒಂದು ಭಾಗವನ್ನು ಒಡೆದು ಈ ಶಾಹಿ ಈದ್ಗಾ ಮಸೀದಿಯನ್ನು ಕಟ್ಟಲಾಗಿದೆ. ಹಾಗಾಗಿ ದೇಗುಲದ ಪಕ್ಕದಲ್ಲೇ ಇರುವ ಮಸೀದಿಯನ್ನು ಕೆಡವಬೇಕು ಎಂದು ಮನವಿ ಮಾಡಿ ಸೆ.26ರಂದು ಒಂದಷ್ಟು ಸಂಘಟನೆಗಳು, ಜನರ ಗುಂಪು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿವೆ.