ನವದೆಹಲಿ: ಕೋಲ್ಕತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಂತರ ಪಶ್ಚಿಮ ಬಂಗಾಳ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದ ಅತ್ಯಾಚಾರ ವಿರೋಧಿ ಮಸೂದೆ ಬಗ್ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬುಧವಾರ (ಸೆಪ್ಟೆಂಬರ್ 4) ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿ: ‘IC 814- ದಿ ಕಂದಹಾರ್ ಹೈಜಾಕ್' ಸಿರೀಸ್ನಲ್ಲಿ ಮಹತ್ವದ ಬದಲಾವಣೆ; ಮೋನಿಕಾ ಶೆರ್ಗಿಲ್ ಸ್ಪಷ್ಟನೆ ಹೀಗಿದೆ..
ಅಪರಾಧವನ್ನು ಆರಂಭದಲ್ಲಿ ತಡೆಯುವಲ್ಲಿ ವಿಫಲರಾಗಿದ್ದು ಈಗ ಅದನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಲೇಟರ್ವೊಂದನ್ನು ಹಂಚಿಕೊಂಡಿರುವ ಅವರು, ಮಹಿಳೆಯರು ಮತ್ತು ಮಕ್ಕಳಿಗೆ ತ್ವರಿತ ನ್ಯಾಯ ಒದಗಿಸುವ ಅತ್ಯಂತ ಪವಿತ್ರ ಕರ್ತವ್ಯವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ನಿರ್ಲಕ್ಷಿಸಿದ್ದಾರೆ. ಇದರಿಂದ ನನಗೆ ದುಃಖವಾಗಿದೆ ಎಂದು ತಿಳಿಸಿದ್ದಾರೆ.
ಅತ್ಯಾಚಾರದಂತಹ ಘೋರ ಅಪರಾಧಗಳನ್ನು ತಡೆಯಲು 2018ರಲ್ಲಿ ಸಂಸತ್ತು ಕಠಿಣ ಕಾನೂನನ್ನು ಅಂಗೀಕರಿಸಿದೆ. ಇದು ತ್ವರಿತ ವಿಚಾರಣೆ ಮತ್ತು ಬಾಕಿ ಇರುವ ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯ ಪ್ರಕರಣಗಳ ಪರಿಹಾರಕ್ಕಾಗಿ ಶೀಘ್ರದಲ್ಲೆ ವಿಶೇಷ ನ್ಯಾಯಾಲಯಗಳನ್ನು(ಎಫ್‌ಟಿಎಸ್‌ಸಿ) ರಚಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
2019, 2020 ಮತ್ತು 2021ರಲ್ಲಿ ಹಲವು ಬಾರಿ ಮಾಡಿದ ಮಾತುಕತೆಗಳ ಬಳಿಕವು ತೃಣಮೂಲ ಕಾಂಗ್ರೆಸ್ ಸರ್ಕಾರವು ಈ ಕೇಂದ್ರದ ಯೋಜನೆಗೆ ಕಾನೂನು (ತಿದ್ದುಪಡಿ) ಕಾಯಿದೆ 2018ರ ಅಡಿಯಲ್ಲಿ ಒಪ್ಪಿಗೆ ನೀಡಲಿಲ್ಲ ಎಂದು ರಿಜಿಜು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಾಕಿ ಉಳಿದಿರುವ ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ವಿಲೇವಾರಿಗಾಗಿ ಎಫ್‌ಟಿಎಸ್‌ಸಿ ಸ್ಥಾಪಿಸಲು ಮಮತಾ ಬ್ಯಾನರ್ಜಿ ಕೇಂದ್ರವು ಮಧ್ಯಸ್ಥಿಕೆ ವಹಿಸುವಂತೆ ಕೇಳಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯಕ್ಕೆ 20 ePOCSO ನ್ಯಾಯಾಲಯಗಳು ಸೇರಿದಂತೆ 123 ಎಫ್‌ಟಿಎಸ್‌ಸಿಗಳನ್ನು ಮೀಸಲಿಡಲಾಗಿದೆ. ಆದರೆ ರಾಜ್ಯ ಸರ್ಕಾರದ ಒಪ್ಪಿಗೆಯನ್ನು ಪಡೆಯಲಾಗಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದು ತುಂಬಾ ಗಂಭೀರವಾದ ವಿಷಯ, ದಯವಿಟ್ಟು ರಾಜಕೀಯ ವಿಷಯವನ್ನಾಗಿ ಮಾಡಬೇಡಿ. ಬಲವಾದ ಕಾನೂನುಗಳು ಅಗತ್ಯ ಆದರೆ ಕಠಿಣ ಕ್ರಮಗಳು ಹೆಚ್ಚು ಮುಖ್ಯ ಎಂದು ಹೇಳಿದ್ದಾರೆ. ಪತ್ರ ಬರೆದಾಗ, ಮಾಧ್ಯಮಗಳು ಈ ಸುದ್ದಿಯನ್ನು ಪ್ರಸಾರ ಮಾಡಿದ್ದವು, ಆದರೆ ಪಶ್ಚಿಮ ಬಂಗಾಳ ಸರ್ಕಾರವು ಕಾರ್ಯನಿರ್ವಹಿಸಲು ವಿಫಲವಾಗಿದೆ!
ಅತ್ಯಾಚಾರ ಅಪರಾಧಿಗಳ ಕ್ರಮಗಳು ಸಂತ್ರಸ್ತೆ ಸಾವಿಗೆ ಕಾರಣವಾದರೆ ಅಥವಾ ಆಕೆಯನ್ನು ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಬಿಟ್ಟರೆ ಮತ್ತು ಇತರ ಅಪರಾಧಗಳಿಗೆ ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆಗೆ ಗುರಿಪಡಿಸುವ, ಅತ್ಯಾಚಾರ ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ರಾಜ್ಯ ಅತ್ಯಾಚಾರ-ವಿರೋಧಿ ಮಸೂದೆಯನ್ನು ಪಶ್ಚಿಮ ಬಂಗಾಳ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದ ಒಂದು ದಿನದ ನಂತರ ಕೇಂದ್ರದ ಪ್ರತಿಕ್ರಿಯೆ ಬಂದಿದೆ.(ಏಜೆನ್ಸೀಸ್)