ನವದೆಹಲಿ: ಸ್ಮಾರ್ಟ್ ಫೋನ್ಗಳಲ್ಲಿನ ಪೂರ್ವ ಸಂಸ್ಥಾಪಿತ (ಪ್ರಿ-ಇನ್ಸ್ಟಾಲ್ಡ್) ಆಪ್ಗಳು ಭದ್ರತೆ ದೃಷ್ಟಿಯಿಂದ ಅಪಾಯಕಾರಿಯಾಗುವ ಸಾಧ್ಯತೆಯಿರುವುದರಿಂದ ಅವುಗಳ ವಿರುದ್ಧ ಗದಾಪ್ರಹಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಆಪ್ಗಳನ್ನು ತೆಗೆದುಹಾಕುವ ಹಾಗೂ ಪ್ರಮುಖ ಆಪರೇಟಿಂಗ್ ಸಿಸ್ಟಂ (ಒಎಸ್) ಅಪ್ಡೇಟ್ಗಳನ್ನು ಪರಿಶೀಲನೆಗೆ ಒಳಪಡಿಸಲು ಅವಕಾಶ ಇರುವಂತೆ ರೂಪಿಸಬೇಕೆಂದು ಎಲ್ಲ ಸ್ಮಾರ್ಟ್ಫೋನ್ ತಯಾರಕರಿಗೆ ತಾಕೀತು ಮಾಡಲು ಕೇಂದ್ರ ಯೋಜನೆ ರೂಪಿಸಿದೆ.
ಬೇಹುಗಾರಿಕೆ ಮತ್ತು ಬಳಕೆದಾರರ ಡೇಟಾ ದುರುಪಯೋಗ ಕಳವಳದ ಹಿನ್ನೆಲೆಯಲ್ಲಿ ಈ ಹೊಸ ನಿಯಮಗಳ ಜಾರಿಗೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ (ಐಟಿ) ಚಿಂತನೆ ನಡೆಸುತ್ತಿದೆ. ‘ಚೀನಾ ಸಹಿತ ಯಾವುದೇ ವಿದೇಶಗಳು ಪೂರ್ವ ಸಂಸ್ಥಾಪಿತ ಆಪ್ಗಳನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎನ್ನುವುದನ್ನು ನಾವು ಖಾತರಿಪಡಿಸಿ ಕೊಳ್ಳಬೇಕಿದೆ. ಇದೊಂದು ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೊಸ ನಿಯಮವು ಭಾರತದಲ್ಲಿ ನೂತನ ಸ್ಮಾರ್ಟ್ ಫೋನ್ ಮಾಡೆಲ್ಗಳ ಬಿಡುಗಡೆ ವೇಳಾಪಟ್ಟಿಯನ್ನು ವಿಳಂಬಗೊಳಿಸುವ ಸಾಧ್ಯತೆಯಿದೆ.
ಅಲ್ಲದೆ ಭಾರಿ ಆದಾಯ ತರುವ ಪ್ರಿ-ಇನ್ಸ್ಟಾಲ್ಡ್ ಆಪ್ಗಳನ್ನು ತೆಗೆಯುವುದರಿಂದ ಸ್ಯಾಮ್ಂಗ್, ಷಿಒಮಿ, ವಿವೊ ಮತ್ತು ಆಪಲ್ಗಳಂಥ ಫೋನ್ ಉತ್ಪಾದಕರಿಗೆ ನಷ್ಟ ಉಂಟಾಗಬಹುದು ಎಂದು ವಿಶ್ಲೇಷಿಸಲಾಗಿದೆ.
ಚೀನಾದ ಪಾರುಪತ್ಯ: ಭಾರತದ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ಕಾರುಬಾರು ಹೆಚ್ಚಿದೆ. ಇಲ್ಲಿ ಮಾರಾಟವಾಗುವ ಸ್ಮಾರ್ಟ್ಫೋನ್ಗಳಲ್ಲಿ ಅರ್ಧದಷ್ಟು ಷಿಒಮಿ, ಒಪ್ಪೊ ಮತ್ತು ವಿವೋ ಕಂಪನಿಗಳದ್ದಾಗಿದೆ ಎಂದು ಕೌಂಟರ್ಪಾಯಿಂಟ್ ದತ್ತಾಂಶ ತಿಳಿಸಿದೆ. ದಕ್ಷಿಣ ಕೊರಿಯಾದ ಸ್ಯಾಮ್ಂಗ್ ಪಾಲು ಶೇ.20 ಹಾಗೂ ಆಪಲ್ ಪಾಲು ಶೇ.3 ಆಗಿದೆ.
ಗಂಭೀರ ಅಪಾಯ: ಭಾರತದಲ್ಲಿ ಬಳಸಲಾಗುತ್ತಿರುವ ಪ್ರಮುಖ ಸ್ಮಾರ್ಟ್ಫೋನ್ಗಳಲ್ಲಿ ಪ್ರಿ-ಇನ್ಸ್ಟಾಲ್ಡ್ ಆಪ್/ಬ್ಲೋಟ್ವೇರ್ಗಳಿದ್ದು ಗೌಪ್ಯತೆ/ಮಾಹಿತಿ ಭದ್ರತೆ ಕುರಿತ ಗಂಭೀರ ಸಮಸ್ಯೆಗಳನ್ನು ಒಡ್ಡುತ್ತವೆ ಎಂದು ಫೆ.8ರ ಐಟಿ ಸಚಿವಾಲಯದ ಸಭೆಯೊಂದರಲ್ಲಿ ಮಂಡಿಸಲಾದ ಗೌಪ್ಯ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಷಿಒಮಿ, ಸ್ಯಾಮ್ಂಗ್, ಆಪಲ್ ಮತ್ತು ವಿವೋ ಕಂಪ ನಿಯ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
ಒಂದು ವರ್ಷ ಗಡುವು: ಹೊಸ ನಿಯಮ ಜಾರಿಯಾದ ಒಂದು ವರ್ಷದೊಳಗೆ ಪೂರ್ವ-ಸಂಸ್ಥಾಪಿತ ಆಪ್ಗಳನ್ನು ಡಿಲೀಟ್ ಅವಕಾಶ ಗ್ರಾಹಕರಿಗೆ ದೊರೆಯುವಂತೆ ಮಾಡಬೇಕು. ಜತೆಗೆ ಹೊಸ ನಿಯಂತ್ರಣ ಅಂಶಗಳನ್ನು ಪಾಲಿಸುವಂತೆ ಸ್ಮಾರ್ಟ್ಫೋನ್ ತಯಾರಕರಿಗೆ ತಾಕೀತು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ, ಈ ನಿಯಮ ಅನುಷ್ಠಾನಕ್ಕೆ ಇನ್ನೂ ದಿನಾಂಕ ನಿಗದಿ ಪಡಿಸಲಾಗಿಲ್ಲ.
ಚೀನಿ ಆ್ಯಪ್ಗಳ ಮೇಲೆ ಪ್ರಹಾರ: ಕೇಂದ್ರವು ಚೀನಾದ ಡಿಜಿಟಲ್ ವ್ಯವಹಾರದ ಮೇಲೆ ಕೆಂಗಣ್ಣು ಬೀರಿದ್ದು, ಟಿಕ್ಟಾಕ್ಸಹಿತ 300ಕ್ಕೂ ಹೆಚ್ಚು ಆಪ್ ನಿಷೇಧಿಸಿದೆ. ಚೀನಿ ಸಂಸ್ಥೆಗಳ ಹೂಡಿಕೆ ಮೇಲೆ ನಿಗಾ ಹೆಚ್ಚಿಸಿದೆ. ಹುವೇ ಮತ್ತು ಹೈಕ್ವಿಷನ್ನಂಥ ಚೀನಿ ಸಂಸ್ಥೆಗಳ ತಂತ್ರಜ್ಞಾನಕ್ಕೆ ಹಲವೆಡೆ ನಿಷೇಧವಿದೆ. ಬೇಹುಗಾರಿಕೆಗೆ ಬಳಸಬಹುದೆಂಬ ಆತಂಕವೇ ಇದಕ್ಕೆ ಕಾರಣವಾಗಿದೆ.