ಯಲ್ಲಾಪುರ: ಕೆಲವು ಮಾಧ್ಯಮಗಳು ಸತ್ತು ಹೋಗಲು ಕೇಂದ್ರ ಸರ್ಕಾರದ ದ್ವಂದ್ವ ನಿಲುವು ಕಾರಣ. ರಾಷ್ಟ್ರೀಯ ಚಿಂತನೆ, ದೇಶಭಕ್ತಿ ಉತ್ತೇಜಿಸುವ ಮಾಧ್ಯಮಗಳನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಒತ್ತಾಯಿಸಿದರು.
ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶಯ ಭಾಷಣ ಮಾಡಿದರು.
ರಾಜ್ಯ ಸರ್ಕಾರದಲ್ಲಿದ್ದವರು ತಮ್ಮ ದೊಡ್ಡ ಫೋಟೋ ಬರಬೇಕು. ಚಂದವಾಗಿ ಬರಬೇಕು ಎಂದು ಬಯಸುತ್ತಾರೆ. ಆದರೆ, ಮಾಧ್ಯಮದ ಪ್ರಮುಖ ಸಮಸ್ಯೆ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸುತ್ತಿಲ್ಲ. ಮಾಧ್ಯಮದ ಬಗ್ಗೆ ಅವರಿಗೆ ಯಾವುದೇ ಆಸಕ್ತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ, ದೇಶದಲ್ಲಿ ರಾಷ್ಟ್ರೀಯತೆ ಚಿಂತನೆ ಇರುವ ಕೆಲವೇ ಕೆಲವು ಪತ್ರಿಕೆ ಹಾಗೂ ಟಿವಿಗಳಿವೆ. ರಾಷ್ಟ್ರೀಯತೆ ಬಗ್ಗೆ ಸಕಾರಾತ್ಮಕವಾಗಿ ಯೋಚಿಸುವ ಉತ್ತಮ ಮಾಧ್ಯಮ ಸಂಸ್ಥೆಗಳು ಮುಚ್ಚುತ್ತಿವೆ. ಎಡಪಂಥೀಯರಿಗೆ, ಕೆಲವರಿಗೆ ಎಲ್ಲಿಂದಲೋ ಹಣ ಬರುತ್ತದೆ. ಪ್ರಾಮಾಣಿಕವಾಗಿ ಉತ್ತಮ ಸೇವೆ ಕೊಡಬೇಕು ಎಂದರೆ ಬಹಳ ಕಷ್ಟವಿದೆ ಎಂದು ವಿವರಿಸಿದರು. ಸರ್ಕಾರದಿಂದ ಮಾಧ್ಯಮಗಳಿಗೆ ಒಂದು ಕಪ್ ಚಹಾ ಕೂಡಾ ಬೇಡ. ಉಪಕಾರ ಆಗುವುದು ಬೇಡ. ಆಗುತ್ತಿರುವ ಅನ್ಯಾಯ ತಪ್ಪಿಸಲಿ. ದೇಶ ರಕ್ಷಣೆ ಮಾಡುವಲ್ಲಿ ನಿಜವಾಗಿ ಗಂಭೀರತೆ ಹೊಂದಿದ್ದರೆ ಮೊದಲು ಮಾಧ್ಯಮಗಳನ್ನು ರಕ್ಷಿಸಿ. ಆಗುತ್ತಿರುವ ತಪ್ಪುಗಳನ್ನು ಸರಿಪಡಿಸಿ ಎಂದು ಒತ್ತಾಯಿಸಿದರು.
ಮುದ್ರಣ ಕಾಗದದ ಬೆಲೆ ಹೆಚ್ಚಳ: ಪತ್ರಿಕೆ ನಡೆಸುವುದು ಹಿಂದಿಗಿಂತಲೂ ಕಷ್ಟವಾಗಿದೆ. ನಾನು ಮೊದಲು ಪ್ರಾರಂಭಿಸಿದ ಪತ್ರಿಕೆ ಮಾರುವ ಪ್ರಸಂಗ ಬಂತು. ನಂತರ ‘ವಿಜಯವಾಣಿ’ ಪತ್ರಿಕೆ ಪ್ರಾರಂಭಿಸಿ ಎಲ್ಲ ಓದುಗರ ಆಶೀರ್ವಾದದಿಂದ ಮತ್ತು ಉತ್ತಮ ಪತ್ರಕರ್ತರ ತಂಡದಿಂದ ವಿಜಯವಾಣಿ ಕೂಡ ಪ್ರಸರಣದಲ್ಲಿ ರಾಜ್ಯಕ್ಕೆ ನಂಬರ್ 1 ಆಗಿದೆ ಎಂದು ಡಾ. ಸಂಕೇಶ್ವರ ಹೇಳಿದರು.
ಒಂದು ಪ್ರತಿ ಹೊರತರಲು ನಮಗೆ 22 ರೂ. ಖರ್ಚಾಗುತ್ತಿದೆ. ಓದುಗ ಪ್ರತಿ ಪತ್ರಿಕೆಗೆ ನೀಡುವ 5 ರೂ.ನಲ್ಲಿ 2.5 ರೂ. ಪತ್ರಿಕೆ ಸಾಗಣೆ ಹಾಗೂ ಹಂಚುವ ಹುಡುಗರಿಗೇ ಖರ್ಚಾಗುತ್ತದೆ. ಮುದ್ರಣ ಕಾಗದದ ಬೆಲೆ ಪ್ರತಿ ಟನ್ಗೆ 430 ಡಾಲರ್ ಇದ್ದಿದ್ದು, ರಷ್ಯಾ-ಯೂಕ್ರೇನ್ ಯುದ್ಧದ ನಂತರ 1260 ಡಾಲರ್ಗೆ ಏರಿಕೆಯಾಗಿದೆ. ಜಗತ್ತಿನಲ್ಲಿ ಕೆನಡಾ, ಸ್ಪೇನ್ ಹಾಗೂ ರಷ್ಯಾಗಳಲ್ಲಿ ಅತಿ ಹೆಚ್ಚು ಕಾಗದ ಉತ್ಪಾದನೆಯಾಗುತ್ತದೆ. ಆ ದೇಶಗಳಿಂದಲೇ ಆಮದು ಮಾಡಿಕೊಳ್ಳುವುದು ಬಿಟ್ಟರೆ ನಮಗೆ ಪರ್ಯಾಯವಿಲ್ಲ. ಈ ಬೆಲೆ ನಿಯಂತ್ರಿಸದೇ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದೆ. ಇದು ಮುದ್ರಣ ಮಾಧ್ಯಮದ ತೀವ್ರ ಹಿನ್ನಡೆಗೆ ಕಾರಣವಾಗುತ್ತಿದೆ. ಅಲ್ಲದೆ, ಕಾಗದ ಆಮದು ಮೇಲೆ ಶೇ.5 ಸುಂಕ ವಿಧಿಸಲಾಗುತ್ತದೆ. ದೇಶದ ಅಭಿವೃದ್ಧಿ ಬಗ್ಗೆ ಯೋಚಿಸುವುದೇ ಆದಲ್ಲಿ ಅಥವಾ ಭವಿಷ್ಯದ ಬಗ್ಗೆ ಕಾಳಜಿ ಇದ್ದಲ್ಲಿ ಕ್ರಮ ಜರುಗಿಸಿ ಎಂದು ಅಂದಾಜು ನೂರು ಬಾರಿ ಸಚಿವ ಪ್ರಲ್ಹಾದ ಜೋಶಿ ಅವರಲ್ಲಿ ನಾನು ಮನವಿ ಮಾಡಿದ್ದೇನೆ ಎಂದರು.
ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಮಾಧ್ಯಮ ಕ್ಷೇತ್ರದ ನೋವು, ನಿಜವಾದ ಕತೆ, ಹಾಗೂ ಸತ್ಯವನ್ನು ಬಿಚ್ಚಿಡುತ್ತಿದ್ದೇನೆ. ಅದನ್ನು ಸಚಿವರು ಅರ್ಥ ಮಾಡಿಕೊಳ್ಳಬೇಕು ಎಂದು ವಿನಂತಿಸಿದರು. ನಾನು ಅಥವಾ ಬೇರೆ ಮಾಧ್ಯಮಗಳು ಯಾವುದೇ ಬೆಂಬಲ ಕೇಳುತ್ತಿಲ್ಲ. ಆದರೆ, ಕೇಂದ್ರ ಸರ್ಕಾರಕ್ಕೆ ಒಂದು ಕಾಮನ್ಸೆನ್ಸ್ ಇರಬೇಕು ಎಂದು ಖಾರವಾಗಿ ಹೇಳಿದರು.
ರೇಟಿಂಗ್ ಏಜೆನ್ಸಿ ಭ್ರಷ್ಟವಾಗಿದೆ. ರೇಟಿಂಗ್ ಏಜೆನ್ಸಿಯ ಪ್ರಮುಖರನ್ನು ಕಳೆದ ಎರಡು ವರ್ಷಗಳಲ್ಲಿ ಬಂಧಿಸಲಾಯಿತು. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಕುರುಡಾಗಿದೆ. ಈ ವ್ಯವಸ್ಥೆಯ ಮೇಲೆ ಕೇಂದ್ರದ ಮೇಲ್ವಿಚಾರಣೆ ಹಾಗೂ ನಿಯಂತ್ರಣ ಇಲ್ಲದ ಕಾರಣ ಸಾಕಷ್ಟು ಉತ್ತಮ ಟಿವಿ ಮಾಧ್ಯಮಗಳು ಮುಚ್ಚಿವೆ, ಮಾರಾಟವಾಗಿವೆ. ಪ್ರಧಾನಿಯವರಿಂದ ಹಿಡಿದು ಎಲ್ಲ ಪ್ರಮುಖ ರಾಜಕಾರಣಿಗಳಿಗೂ ಇದು ಗೊತ್ತಿದೆ. ಆದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಡಾ. ವಿಜಯ ಸಂಕೇಶ್ವರ ಅಸಮಾಧಾನ ವ್ಯಕ್ತಪಡಿಸಿದರು.
ಕಾಲ ಬದಲಾಗುತ್ತಿದೆ. 5ಜಿ ಯುಗದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಅದಕ್ಕೆ ತಕ್ಕಂತೆ ಬದಲಾಗಿ, ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಬೆಳೆಯಿರಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಅನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಶೀಘ್ರದಲ್ಲಿ 5ಜಿ ದೇಶದ ಎಲ್ಲ ಮೂಲೆಗಳಿಗೂ ತಲುಪಲಿದೆ. ಭಾರತೀಯ ತಂತ್ರಜ್ಞಾನದಲ್ಲೇ 6ಜಿ ಅಭಿವೃದ್ಧಿಪಡಿಸಲಾಗುತ್ತಿದೆ. ದೇಶ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಬೆಳೆಯುತ್ತಿದೆ. ಇಲ್ಲಿರುವ ದೊಡ್ಡ ಸಂಖ್ಯೆಯ ಯುವಕರು, ಅವರಲ್ಲಿರುವ ಕೌಶಲ ಭಾರತಕ್ಕೆ ವರವಾಗಿದೆ ಎಂದರು. ಧಾರವಾಡ ಕವಿವಿ ಕುಲಪತಿ ಕೆ.ಬಿ. ಗುಡಸಿ ಮಾತನಾಡಿ, ಪತ್ರಿಕೋದ್ಯಮದಲ್ಲಿ ಇನ್ನೂ ಕ್ರೀಡೆ, ಅಪರಾಧ ಮುಂತಾದ ಕೆಲ ವಿಚಾರಗಳ ಬಗ್ಗೆ ವರದಿ ಮಾಡಬಲ್ಲ ತಜ್ಞರ ಕೊರತೆ ಕಾಡುತ್ತಿದೆ ಎನಿಸುತ್ತಿದೆ. ಭಾಷೆಯ ಸಂವಹನದ ಕೊರತೆಯೂ ಕಾಡುತ್ತಿದೆ. ಅದನ್ನು ನೀಗಿಸುವಲ್ಲಿ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಮುಂದಾಗಲಿ ಎಂದರು.
ವಿಶ್ವದರ್ಶನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ತನ್ನ ದುಡಿಮೆಯ ಪ್ರತಿ ಕ್ಷಣವನ್ನೂ ದೇಶಕ್ಕಾಗಿ ಮುಡಿಪಾಗಿಟ್ಟವರು, ಪತ್ರಿಕೋದ್ಯಮದಲ್ಲಿ ಗುಣಾತ್ಮಕ ಬದಲಾವಣೆ ತಂದವರು ಡಾ. ವಿಜಯ ಸಂಕೇಶ್ವರ ಅವರು. ಅವರಿಂದ ಪತ್ರಿಕೋದ್ಯಮ ಹಿಗ್ಗಿತು ಎಂದು ಬಣ್ಣಿಸಿದರು. ಮೀಡಿಯಾ ಸ್ಕೂಲ್ ಪ್ರಾಚಾರ್ಯ ನಾಗರಾಜ ಭಟ್ ಇಳೆಗುಂಡಿ ಮಾತನಾಡಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದಿಂದ ಡಾಕ್ಟರ್ ಆಫ್ ಸೈನ್ಸ್ ಪದವಿ ಪಡೆದ ಮೈಸೂರು ಮರ್ಕಂಟೈಲ್ ಕಂಪನಿಯ ಮಾಲೀಕ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ಎಚ್.ಎಸ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನರಸಿಂಹ ಕೋಣೆಮನೆ ವಂದಿಸಿದರು.