ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಅಶ್ಲೀಲ ಸಿಡಿ ಕುರಿತಂತೆ ಸಿಡಿಯಲ್ಲಿರುವ ಯುವತಿ ಇಂದು 24 ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾಳೆ.
ವಸಂತ ನಗರದ ಗುರುನಾನಕ್ ಭವನದಲ್ಲಿರುವ ವಿಶೇಷ ನ್ಯಾಯಾಲಯದಲ್ಲಿ ಯುವತಿ ಹಾಜರಾಗಿ ಸುಮಾರು ಎರಡು ಗಂಟೆ ತನ್ನ ಹೇಳಿಕೆಯನ್ನು ನ್ಯಾಯಾಧೀಶರ ಬಳಿ ದಾಖಲಿಸಿದ್ದಾಳೆ. ಈ ವೇಳೆ ಅತ್ಯಂತ ರಹಸ್ಯವಾಗಿ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.
ನಂತರ ಯುವತಿಯನ್ನು ವಶಕ್ಕೆ ಪಡೆದ ಎಸ್ಐಟಿ ಪೊಲೀಸರು ಆಡುಗೋಡಿಯಲ್ಲಿರು ಎಸ್ಐಟಿ ಎಫ್ಎಸ್ಐಎಲ್ನ ಸೆಲ್ಗೆ ಕರೆದೋಯ್ದು ವಿಚಾರಣೆ ನಡೆಸುತ್ತಿದ್ದಾರೆ. ತನಿಖಾಧಿಕಾರಿ ಎಸಿಪಿ ಕವಿತಾ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಪ್ರಶ್ನೆಗಳನ್ನು ಕೇಳಿದ್ದಾರೆ.
ಇಲ್ಲಿ ವಿಚಾರಣೆ ಮುಗಿದ ಬಳಿಕ ಯುವತಿಯನ್ನು ಬೌರಿಂಗ್ ಆಸ್ಪತ್ರೆಗೆ ಕರೆದೋಯ್ದು ವೈದ್ಯಕೀಯ ತಪಾಸಣೆ ನಡೆಸಲಿದ್ದಾರೆ. ಅಲ್ಲದೇ ಸ್ಥಳ ಮಹಜರು ಕೂಡ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ ಸಿಡಿ ಯುವತಿ ಬೆಂಗಳೂರಿನಲ್ಲಿ ವಿಶೇಷ ಕೋರ್ಟ್ ಎದುರು ಹಾಜರಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಜಿಲ್ಲೆ ಪ್ರವಾಸ ಮೊಟುಕುಗೊಳಿಸಿ ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಿದ್ದಾರೆ.