ನ್ಯೂಸ್

VIDEO| ಸಿಸಿಟಿವಿಯಲ್ಲಿ ಸೆರೆಯಾಯ್ತು ಪಾಕ್​ ವಿಮಾನ ಪತನದ ಭೀಕರ ದೃಶ್ಯ...!

ನವದೆಹಲಿ: ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಏರ್​ಬಸ್​ ಎ320 ವಿಮಾನವು ಕರಾಚಿಯ ಜನನಿಬಿಡ ಪ್ರದೇಶದಲ್ಲಿ ನಿನ್ನೆ (ಶುಕ್ರವಾರ) ಮಧ್ಯಾಹ್ನ ಪತನಗೊಂಡು 97 ಮಂದಿ ಸಾವಿಗೀಡಾಗಿದ್ದಾರೆ. ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿರುವ ಪತನದ ಭೀಕರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಮಾನ ನಿಲ್ದಾಣದಿಂದ ಒಂದು ಕಿ.ಮೀ ಒಳಗಡೆಯೇ ಈ ಘಟನೆ ನಡೆದಿದ್ದು, ವಿಮಾನ ಲ್ಯಾಂಡ್​ ಆಗುವ ಮುನ್ನ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದ ಕೆಲವೇ ಸೆಕೆಂಡುಗಳಲ್ಲಿ ಆ ಪ್ರದೇಶದ ಸುತ್ತ ದಟ್ಟ ಹೊಗೆ ಆವರಿಸಿದ ಭಯಾನಕ ದೃಶ್ಯವನ್ನು ಸಿಸಿಟಿವಿ ವಿಡಿಯೋದಲ್ಲಿ ನೋಡಬಹುದಾಗಿದೆ. ವಿಮಾನ ಪತನಗೊಂಡ ಸಮೀಪದ ಮನೆಯ ಮೇಲ್ಛಾವಣಿಯಲ್ಲಿದ್ದ ಸಿಸಿಟಿವಿ ದೃಶ್ಯವನ್ನು ಸೆರೆಹಿಡಿದಿದೆ.

ಅಂದಹಾಗೆ ಪಿ.ಕೆ-8303 ನೋಂದಣಿಯ ವಿಮಾನದಲ್ಲಿ 99 ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ. ಲಾಹೋರ್​ ವಿಮಾನ ನಿಲ್ದಾಣದಿಂದ ಹೊರಟು ಕರಾಚಿಯ ಜಿನ್ಹಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಶುಕ್ರವಾರ ಮಧ್ಯಾಹ್ನವೇ ದುರ್ಘಟನೆ ಸಂಭವಿಸಿದೆ. ಪರಿಣಾಮ 97 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಉಳಿದ ಇಬ್ಬರು ಪ್ರಯಾಣಿಕರು ಪವಾಡವೆಂಬಂತೆ ಬದುಕುಳಿದಿದ್ದಾರೆ.

ಮೃತರಾದ 97 ಮಂದಿಯೂ ವಿಮಾನದಲ್ಲೇ ಇದ್ದರಾ ಅಥವಾ ತೀವ್ರವಾಗಿ ಹಾನಿಗೊಳಗಾಗಿರುವ ಅನೇಕ ಮನೆಗಳ ನಿವಾಸಿಗಳನ್ನು ಇದರಲ್ಲಿ ಸೇರಿಸಿದ್ದಾರೆಯೇ ಎಂಬುದನ್ನು ಇನ್ನಷ್ಟೇ ಖಚಿತಪಡಿಸಿಕೊಳ್ಳಬೇಕಿದೆ ಎಂದು ಸಿಂಧ್​ ಪ್ರಾಂತ್ಯದ ಆರೋಗ್ಯ ಸಚಿವ ಅಝ್ರಾ ಪೆಚುಹೊ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೊದಲ ಲ್ಯಾಂಡಿಂಗ್ ಪ್ರಯತ್ನವು ರದ್ದಾದ ಬಳಿಕ ವಿಮಾನವೂ ಎರಡನೇ ಲ್ಯಾಂಡಿಂಗ್​ ಪ್ರಯತ್ನಕ್ಕೆ ಮುಂದಾಗಿತ್ತು ಎಂದು ತಿಳಿದುಬಂದಿದೆ. ವಿಮಾನ ಪತನಕ್ಕೂ ಮುನ್ನ ಓರ್ವ ಪೈಲಟ್​ ತನ್ನ ಹೇಳಿಕೆಯನ್ನು ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್​ನಲ್ಲಿ ದಾಖಲಿಸಿದ್ದು, ವಿಮಾನದ ಎರಡು ಇಂಜಿನ್​ಗಳು ಸ್ಥಗಿತಗೊಂಡಿರುವುದನ್ನು ಏರ್​ ಟ್ರಾಫಿಕ್​ ನಿರ್ವಾಹಕರಿಗೆ ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಯೊಬ್ಬರು ಹೇಳುವಂತೆ ಮೊದಲು ಮೊಬೈಲ್​ ಟವರ್​ಗೆ ಡಿಕ್ಕಿ ಹೊಡೆದ ವಿಮಾನ ನಂತರ ಮಲಿರ್​ನಲ್ಲಿರುವ ಮಾಡೆಲ್​ ಕಾಲನಿ ಬಳಿಯಿರುವ ಜಿನ್ಹಾ ಗಾರ್ಡನ್​ ಏರಿಯಾ ಕಟ್ಟಡವೊಂದರ ಮೇಲೆ ಪತನವಾಯಿತು. ಇದರಿಂದ ಸಮೀಪದ ಅನೇಕ ಮನೆಗಳಿಗೆ ಬೆಂಕಿ ತಗುಲಿ ಹಾನಿಯಾಗಿದೆ ಎಂದು ವಿವರಿಸಿದ್ದಾರೆ.

ಕರೊನಾ ವೈರಸ್​ ಲಾಕ್​ಡೌನ್​ನಿಂದ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಸ್ಥಬ್ಧವಾಗಿದ್ದ ವಿಮಾನ ಹಾರಾಟ ಮರು ಆರಂಭವಾದ ಒಂದೇ ವಾರದಲ್ಲಿ ಈ ದುರ್ಘಟನೆ ಸಂಭವಿಸಿದೆ. (ಏಜೆನ್ಸೀಸ್​)