ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಬಾಂಗ್ಲಾದೇಶ ತೊರೆದು ಆಶ್ರಯ ಕೋರಿ ಭಾರತಕ್ಕೆ ಆಗಮಿಸಿದರು. ಬಾಂಗ್ಲಾದಿಂದ ಹೊರಟ ಕೆಲವೇ ಗಂಟೆಗಳಲ್ಲಿ ಹಸೀನಾ ಅವರ ಅಧಿಕೃತ ನಿವಾಸವನ್ನು ಪ್ರತಿಭಟನಾಕಾರರು ವಶಕ್ಕೆ ಪಡೆದರು. ಈ ವೇಳೆ ಮನೆಯಲ್ಲಿದ್ದ ಕುರ್ಚಿಗಳು, ಬಟ್ಟೆಗಳು ಮಾತ್ರವಲ್ಲದೆ, ಸಾಕುಪ್ರಾಣಿಗಳಾದ ಕೋಳಿಗಳು, ಮೀನು, ಬೆಕ್ಕು, ಜರ್ಮನ್ ಶೆಫರ್ಡ್ ನಾಯಿ ಸೇರಿದಂತೆ ಹಲವು ವಸ್ತುಗಳನ್ನು ಪ್ರತಿಭಟನಾಕಾರರು ಲೂಟಿ ಮಾಡಿದರು. ಈಗ ಬಾಂಗ್ಲಾದೇಶದ ಚಾರಿಟಿಯೊಂದು ಶೇಖ್ ಹಸೀನಾ ಅವರ ಅಧಿಕೃತ ನಿವಾಸದಿಂದ ಕದ್ದ ಗೋಲ್ಡನ್ ರಿಟ್ರೈವರ್ ಎಂಬ ಬೆಕ್ಕು ಸೇರಿ ಪ್ರಾಣಿಗಳನ್ನು ಹಿಂದಿರುಗಿಸುವಂತೆ ಕೇಳಿದೆ.
ಶೇಖ್ ಹಸೀನಾ ಅವರ ನಿವಾಸದಿಂದ ಕದ್ದ ಬೆಕ್ಕನ್ನು 40,000 ಬಾಂಗ್ಲಾದೇಶಿ ಟಾಕಾಗೆ ಮಾರಾಟ ಮಾಡಲಾಗಿದೆ ಎಂದು ಬಾಂಗ್ಲಾದೇಶದ ಚಾರಿಟಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ. ಇದಾದ ಬಳಿಕ ಬಾಂಗ್ಲಾದೇಶದ ವಿಶೇಷ ಭದ್ರತಾ ಪಡೆ ಆ ಬೆಕ್ಕನ್ನು ಪ್ರಧಾನಿ ನಿವಾಸಕ್ಕೆ ಮರಳಿ ತಂದಿದೆ. ಈ ವಿಚಾರವನ್ನು ‘ಅಭ್ಯರಣ್ಯ’ ಎಂಬ ಸಂಘಟನೆ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದೆ. ಜರ್ಮನ್ ಶೆಫರ್ಡ್ ನಾಯಿಯನ್ನು ಕೂಡ ಹಿಂತಿರುಗಿಸಲಾಗಿದೆ.
ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಅದರಲ್ಲಿ ಜರ್ಮನ್ ಶೆಫರ್ಡ್ ನಾಯಿಯನ್ನು ಪ್ರಧಾನಿ ನಿವಾಸದಿಂದ ಕುತ್ತಿಗೆಗೆ ಸರಪಳಿ ಹಾಕಿ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದಿತು. ಪ್ರಧಾನಿ ನಿವಾಸ ಗಾನ ಭವನದಿಂದ ಕಳ್ಳತನವಾಗಿರುವ ಎಲ್ಲ ಪ್ರಾಣಿಗಳನ್ನು ವಾಪಸ್ ಕರೆತರಲು ಪ್ರಯತ್ನಿಸುತ್ತಿದ್ದೇವೆ ಎಂದು ಸಂಘಟನೆ ತಿಳಿಸಿದೆ. ಅಷ್ಟೇ ಅಲ್ಲ ಇದೇ ಸಂಸ್ಥೆ ಎಲ್ಲ ಪ್ರಾಣಿಗಳ ಆರೈಕೆಯನ್ನೂ ಮಾಡುತ್ತಿದೆ. ಅಗತ್ಯ ಬಿದ್ದರೆ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.
ಹಿಂಸಾಚಾರ ಭುಗಿಲೇಳಲು ಕಾರಣ ಏನು?
76 ವರ್ಷ ವಯಸ್ಸಿನ ಶೇಖ್ ಹಸೀನಾ ಕಳೆದ 20 ವರ್ಷಗಳಿಂದ ಬಾಂಗ್ಲಾದೇಶದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಪ್ರತಿಭಟನೆಯ ತೀವ್ರತೆ ಕಂಡು ಭಯಭೀತರಾಗಿ, ತಮ್ಮ ಪಿಎಂ ಕುರ್ಚಿಗೆ ರಾಜೀನಾಮೆ ಘೋಷಿಸಿ, ಸದ್ದಿಲ್ಲದಂತೆ ದೇಶ ತೊರೆಯುವ ಮುಖೇನ ಪಲಾಯನ ಮಾಡಿದ್ದಾರೆ. ಇಷ್ಟೆಲ್ಲಾ ಗಲಭೆಗೆ ಮೂಲ ಕಾರಣವೇ ವಿವಾದಾತ್ಮಕ ಸರ್ಕಾರಿ ಉದ್ಯೋಗ ಮೀಸಲಾತಿ. 1971ರ ಸ್ವತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡವರ ಮಕ್ಕಳಿಗೆ ಸರ್ಕಾರಿ ಉದ್ಯೋಗಗಳಲ್ಲಿ 30% ಮೀಸಲಾತಿ ನೀಡಲಾಗಿತ್ತು. ಅಂದಿನಿಂದಲೂ ಇದಕ್ಕೆ ದೊಡ್ಡ ಮಟ್ಟದಲ್ಲಿ ಅಪಸ್ವರ ಕೇಳಿಬಂದಿತ್ತು. ಆದ್ರೆ, ಯಾವಾಗ ಬಾಂಗ್ಲಾ ಸರ್ಕಾರ ಈ ಯೋಜನೆಯನ್ನು ಅವರ ಮುಂದಿನ ತಲೆಮಾರಿಗೂ ವಿಸ್ತರಿಸುವ ಪ್ರಸ್ತಾಪವನ್ನು ಮುಂದಿಟ್ಟಿತೋ ಅಲ್ಲೇ ಮೊದಲ ಕಿಡಿ ಹತ್ತಿಕೊಂಡಿತು. 1971ರಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವಿನ ಸ್ವಾತಂತ್ರ್ಯ ಯುದ್ಧದಲ್ಲಿ ಪಾಲ್ಗೊಂಡಿದ್ದವರ ಕುಟುಂಬದ ಸದಸ್ಯರಿಗೆ 30% ಸರ್ಕಾರಿ ಉದ್ಯೋಗಗಳನ್ನು ಕಾಯ್ದಿರಿಸುವ ಯೋಜನೆಯನ್ನು ಬಾಂಗ್ಲಾ ಸರ್ಕಾರ ಜಾರಿಗೊಳಿಸಿತ್ತು. ಈ ವ್ಯವಸ್ಥೆಯು ಸಂಪೂರ್ಣವಾಗಿ ತಾರತಮ್ಯದಿಂದ ಕೂಡಿದೆ. ಪ್ರಧಾನಿ ಹಸೀನಾ ತನ್ನ ಅವಾಮಿ ಲೀಗ್ ಪಕ್ಷದ ಬೆಂಬಲಿಗರಿಗೆ ಅನುಕೂಲವಾಗುವಂತೆ ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತಂದಿದ್ದಾರೆ ಎಂದು ಪ್ರತಿಭಟನಾಕಾರರು ವಾದಿಸುತ್ತಾರೆ. 1972ರಲ್ಲಿ ಸ್ಥಾಪಿಸಲಾದ ಕೋಟಾ ವ್ಯವಸ್ಥೆ ಅವಾಮಿ ಲೀಗ್ ಬೆಂಬಲಿಗರಿಗೆ ಸಹಾಯವಾಗುವಂತೆ ಜಾರಿಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಭಾರೀ ಅನ್ಯಾಯವಾಗಿದೆ ಮತ್ತು ಇತರ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಮಿತಿಗೊಳಿಸಲಾಗುತ್ತಿದೆ. ಕಷ್ಟಪಟ್ಟು ಮುಂದೆ ಬರುವವರಿಗೆ ಈ ಮೀಸಲಾತಿ ಅವಕಾಶ ಕಸಿದುಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಹಸೀನಾ ನೀಡಿದ ಸಾರ್ವಜನಿಕ ಹೇಳಿಕೆಗಳೇ ಇದೀಗ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಲು ಕಾರಣ ಎಂಬುದರಲ್ಲಿ ಕಿಂಚಿತ್ತು ಅನುಮಾನವಿಲ್ಲ.
ಪ್ರತಿಭಟನೆ ಸ್ಪೋಟಗೊಂಡಿದ್ದು ಯಾವಾಗ?
ಕಳೆದ ಕೆಲವು ದಿನಗಳಿಂದ ಈ ವಿಷಯವಾಗಿ ಪ್ರತಿಭಟನಕಾರರು ಮತ್ತು ಆಡಳಿತ ಪಕ್ಷದ ಬೆಂಬಲಿಗರ ಮಧ್ಯೆ ತೀವ್ರ ಘರ್ಷಣೆ ನಡೆಯುತ್ತಿತ್ತು. ಸರ್ಕಾರದಿಂದ ಬಂದ ಸಂಧಾನ ಪ್ರಸ್ತಾಪವನ್ನು ತಿರಸ್ಕರಿಸಿರುವ ಪ್ರತಿಭಟನಕಾರರು ನಿನ್ನೆ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ಪ್ರಾರಂಭಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭಾನುವಾರ ಬೆಳಗ್ಗೆ “ ತಾರತಮ್ಯ ವಿರೋಧಿ ವಿದ್ಯಾರ್ಥಿ ಸಂಘಟನೆ’ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಸರ್ಕಾರದ ಬೆಂಬಲಿಗ ಸಂಘಟನೆಗಳಾದ ಅವಾಮಿ ಲೀಗ್ ಛಾತ್ರ ಲೀಗ್ ಮತ್ತು ಜುಬೊ ಲೀಗ್ ಕಾರ್ಯಕರ್ತರು ನುಗ್ಗಿದಾಗ ಗಲಾಟೆ ಆರಂಭವಾಗಿ ಹಿಂಸಾರೂಪ ಪಡೆಯಿತು. ತದನಂತರ ದೇಶದ ಇತರ ಭಾಗಗಳಿಗೂ ಹಬ್ಬಿತು. ನೂರಾರು ಸರ್ಕಾರಿ ವಾಹನಗಳಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿ, ಮೀಸಲಾತಿ ರದ್ದುಗೊಳಿಸುವಂತೆ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರಕ್ಕೆ ಮನವಿ ಈ ಮಧ್ಯೆ, ಹಿಂಸಾಚಾರವನ್ನು ರಾಜಕೀಯ ನಿರ್ಧಾರಗಳ ಮೂಲಕ ನಿಯಂತ್ರಣಕ್ಕೆ ತರುವಂತೆ ಕೆಲವು ಮಾಜಿ ಸೇನಾಧಿಕಾರಿಗಳು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಪ್ರತಿಭಟನೆ ಢಾಕಾದ ಆಸ್ಪತ್ರೆ ಆವರಣದಲ್ಲಿ ಬೆಂಕಿ ಹಚ್ಚಿದ ಪ್ರತಿಭಟನಾಕಾರರು. ಪರಿಸ್ಥಿತಿ ನಿಯಂತ್ರಣಕ್ಕೆ ಯೋಧರನ್ನು ಬಳಸುವುದು ಬೇಡ ಎಂದು ದೇಶಾದ್ಯಂತ ಕರ್ಪೂ ಜಾರಿಗೊಳಿಸಲಾಗಿದ್ದು, ಇದೀಗ ಭಾರತ-ಬಾಂಗ್ಲಾ ಗಡಿಭಾಗದಲ್ಲಿ ಬಿಎಸ್ಎಫ್ ಪಡೆ ಹೈ ಅಲರ್ಟ್ ಆಗಿ ಕಾರ್ಯನಿರ್ವಹಿಸುತ್ತಿದೆ. (ಏಜೆನ್ಸೀಸ್)