ನ್ಯೂಸ್

ಹೂಡಿಕೆದಾರರಿಗೆ ಹಣದ ಸುರಿಮಳೆ: ಒಂದು ವರ್ಷದಲ್ಲಿ 334%; ಆರು ತಿಂಗಳಲ್ಲಿ 168% ಹೆಚ್ಚಳ: ಈಗ 3 ಷೇರು ಉಚಿತ!

ಮುಂಬೈ: ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ (Motilal Oswal Financial Services) ತನ್ನ ಹೂಡಿಕೆದಾರರಿಗೆ ದೊಡ್ಡ ಉಡುಗೊರೆಯನ್ನು ಘೋಷಿಸಿದೆ. ಈ ಕಂಪನಿಯು 3:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ಪ್ರಕಟಿಸಿದೆ. ಅಂದರೆ, ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಪ್ರತಿ 1 ಷೇರಿಗೆ 3 ಬೋನಸ್ ಷೇರುಗಳನ್ನು ಹೂಡಿಕೆದಾರರಿಗೆ ನೀಡುತ್ತದೆ.

ಕಂಪನಿಯು ಬೋನಸ್ ಷೇರುಗಳನ್ನು ನೀಡುತ್ತಿರುವುದು ಇದೇ ಮೊದಲು. ಮೋತಿಲಾಲ್ ಓಸ್ವಾಲ್ ಈ ಬೋನಸ್ ಷೇರುಗಳ ದಾಖಲೆಯ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಬೋನಸ್​ ಷೇರು ಸುದ್ದಿಯ ಹಿನ್ನೆಲೆಯಲ್ಲಿ ಈ ಷೇರು ಬೆಲೆ ಶೇ. 5ಕ್ಕೂ ಹೆಚ್ಚು ಏರಿಕೆಯಾಗಿ, ರೂ. 2600.65 ಮಟ್ಟವನ್ನು ತಲುಪಿತು.

ದೇಶೀಯ ಬ್ರೋಕರೇಜ್ ಸಂಸ್ಥೆಯಾದ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್‌ ಕಂಪನಿಯು ಮಾರ್ಚ್ 2024ಕ್ಕೆ ಕೊನೆಗೊಂಡ ತ್ರೈಮಾಸಿಕದ ಲಾಭದಲ್ಲಿ 334% ರಷ್ಟು ಭಾರಿ ಜಿಗಿತ ಕಂಡುಬಂದಿದೆ.

ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಜನವರಿ-ಮಾರ್ಚ್ 2024 ತ್ರೈಮಾಸಿಕದಲ್ಲಿ ರೂ 724.6 ಕೋಟಿ ಲಾಭ ಗಳಿಸಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ ಕಂಪನಿಯ ಲಾಭ 167 ಕೋಟಿ ರೂ. ಇತ್ತು. ಮಾರ್ಚ್ 2024 ರ ತ್ರೈಮಾಸಿಕದಲ್ಲಿ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಆದಾಯವು ವರ್ಷದಿಂದ ವರ್ಷಕ್ಕೆ 108% ರಷ್ಟು ಏರಿಕೆಯಾಗಿ 2141.3 ಕೋಟಿ ರೂ. ತಲುಪಿದೆ. ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಆದಾಯವು 1027.4 ಕೋಟಿ ರೂ. ಇತ್ತು.

ಕಳೆದ ಒಂದು ವರ್ಷದಲ್ಲಿ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್‌ನ ಷೇರುಗಳಲ್ಲಿ ಭಾರಿ ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಕಂಪನಿಯ ಷೇರುಗಳ ಬೆಲೆ 315% ಕ್ಕಿಂತ ಹೆಚ್ಚು ಏರಿಕೆಯಾಗಿದೆ.

ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಷೇರುಗಳ ಬೆಲೆ ಏಪ್ರಿಲ್ 27, 2023 ರಂದು 626.55 ರೂ. ಇತ್ತು. ಈಗ 2600.65 ರೂ. ತಲುಪಿದೆ.

ಕಳೆದ 6 ತಿಂಗಳಲ್ಲಿ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಷೇರುಗಳು 168% ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ಕಂಪನಿಯ ಷೇರುಗಳ ಬೆಲೆ ಅಕ್ಟೋಬರ್ 27, 2023 ರಂದು ರೂ 969.50 ರಷ್ಟಿತ್ತು, ಅದು ಈಗ ರೂ 2600 ದಾಟಿದೆ. ಅದೇ ಸಮಯದಲ್ಲಿ, ಈ ವರ್ಷದಲ್ಲಿ ಇಲ್ಲಿಯವರೆಗೆ, ಕಂಪನಿಯ ಷೇರುಗಳು ಶೇಕಡಾ 107 ರಷ್ಟು ಏರಿಕೆ ಕಂಡಿವೆ. ಅಂದರೆ, ಈ ವರ್ಷದ ಕೇವಲ 4 ತಿಂಗಳಲ್ಲಿ ಕಂಪನಿಯ ಷೇರುಗಳು ಹೂಡಿಕೆದಾರರ ಹಣವನ್ನು ದ್ವಿಗುಣಗೊಳಿಸಿದೆ.