ಅಹಮದಾಬಾದ್: 16 ಸಾವಿರಕ್ಕೂ ಹೆಚ್ಚು ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿದ ಹೃದ್ರೋಗ ತಜ್ಞ ಹಾರ್ಟ್ ಅಟ್ಯಾಕ್ನಿಂದ ಮೃತಪಟ್ಟಿರುವ ಘಟನೆ ಗುಜರಾತಿನ ಜಾಮ್ನಗರದಲ್ಲಿ ನಡೆದಿದೆ.
ಖ್ಯಾತ ಹೃದ್ರೋಗ ತಜ್ಞ ಡಾ.ಗೌರವ್ ಗಾಂಧಿ(41) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ವೈದ್ಯರ ಸಾವಿನಿಂದ ಶೋಕ ಮಡುಗಟ್ಟಿದ್ದು ಜಾಮ್ನಗರದಲ್ಲಿ ಇದ್ದ ಅತ್ಯುತ್ತಮ ಹೃದ್ರೋಗ ತಜ್ಞರಲ್ಲಿ ಇವರು ಕೂಡ ಒಬ್ಬರು ಎಂದು ಹೇಳಲಾಗಿದೆ.
ಈ ಕುರಿತು ಪೊಲೀಸ್ ಅಧಿಕಾರಿ ಒಬ್ಬರು ಪ್ರತಿಕ್ರಿಯಿಸಿದ್ದು ಸೋಮವಾರ ರಾತ್ರಿ ಎಂದಿನಂತೆ ತಮ್ಮ ಕಾರ್ಯ ಮುಗಿಸಿ ಮನೆಗೆ ವಾಪಸ್ಸಾಗಿದ್ದ ವೈದ್ಯ ಗಾಂಧಿ ಅವರು ಮಲಗಿರುವಾಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ಧಾರೆ. ಎಂದಿನಂತೆ ಕುಟುಂಬಸ್ಥರ ಜೊತೆಗೆ ಆಹಾರ ಸೇವಿಸಿದ ಗೌರವ್ ಸಾಮಾನ್ಯವಾಗಿ ಇದ್ದರೂ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ.
ಮರುದಿನ ಬೆಳಗ್ಗೆ ಸುಮಾರು 6 ಘಂಟೆಗೆ ಕುಟುಂಬಸ್ಥರು ಅವರನ್ನು ಏಳಿಸಲು ಪ್ರಯತ್ನಿಸಿದ್ದಾರೆ. ಆದರೆ, ಅವರು ಯಾರ ಮಾತಿಗೂ ಪ್ರತಿಕ್ರಿಯಿಸಲಿಲ್ಲ. ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ವೈದ್ಯರು ಗೌರವ್ ಮೃತಪಟ್ಟಿರುವುದಾಗಿ ಘೋಷಿಸಿದ್ಧಾರೆ ಎಂದು ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದ್ಧಾರೆ.
ವೈದ್ಯ ಗೌರವ್ ಗಾಂಧಿ ಇಲ್ಲಿಯವರೆಗೂ 16,000ಕ್ಕೂ ಹೆಚ್ಚು ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ. ಹೃದಯಾಘಾತದಿಂದ ಅವರು ಮೃತಪಟ್ಟಿರಬಹುದು ಎಂದು ವೈದ್ಯರು ತಿಳಿಸಿದ್ಧಾರೆ.