Cancer Patient: ಚರ್ಮ ಕ್ಯಾನ್ಸರ್ನಿಂದ ಬಳಲುತ್ತಿರುವ ಅಜ್ಜಿಯನ್ನು ಕಸದ ರಾಶಿಗೆ ಮೊಮ್ಮಗನೇ ಎಸೆದು ಹೋದ ಹೃದಯ ವಿದ್ರಾವಕ ಘಟನೆ ಮುಂಬೈ ನಗರದಲ್ಲಿ ವರದಿಯಾಗಿದೆ.
ಕಸದ ರಾಶಿಯಲ್ಲಿ ಜೀವಂತವಾಗಿ ಬಿದ್ದಿದ್ದ ವೃದ್ಧೆಯನ್ನು ಸ್ಥಳೀಯರು ಗಮನಿಸಿದ್ದಾರೆ. ಆಕೆ ಕಸದಲ್ಲಿ ಬೀಳಲು ಯಾರು ಕಾರಣವೇನು ಎಂಬುದು ಮೊದಲಿಗೆ ತಿಳಿದುಬಂದಿಲ್ಲ. ಮಾಹಿತಿ ಬೆನ್ನಲ್ಲೇ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ತೀವ್ರ ಅನಾರೋಗ್ಯದಿಂದ ಅಸ್ವಸ್ಥರಾಗಿದ್ದ ವೃದ್ಧೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ನಡುವೆ ಮೊಮ್ಮಗನೇ ಇಂಥಾ ಹೇಯ ಕೃತ್ಯ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆ ಹೇಳಿದೆ.
ವೃದ್ಧೆ ಕೊಂಚ ಚೇತರಿಸಿಕೊಂಡ ಬಳಿಕ ಮಾತನಾಡಿಸಿದ ಖಾಕಿ ಪಡೆ, ನಿಮ್ಮ ಈ ಸ್ಥಿತಿಗೆ ಯಾರು ಕಾರಣ ಎಂದು ಪ್ರಶ್ನಿಸಿದ್ದಾರೆ ಇದಕ್ಕೆ ಉತ್ತರಿಸಿದ ಅವರು, ನನ್ನ ಮೊಮ್ಮಗ ನನ್ನನ್ನು ಕಸದ ರಾಶಿಯಲ್ಲಿ ಎಸೆದು ಹೋದ ಎಂದು ತಿಳಿಸಿದ್ದಾರೆ. ಕಸದ ತೊಟ್ಟಿಯಲ್ಲಿ ಬೆಳಗ್ಗಿನ ಜಾವ ವೃದ್ಧೆಯನ್ನು ಬಿಟ್ಟು ಹೋಗಲಾಗಿದೆ. ಆದರೆ, ಸಂಜೆ 5:30ರ ಬಳಿಕ ಈ ಮಾಹಿತಿ ಪೊಲೀಸರ ಗಮನಕ್ಕೆ ಬಂದಿದೆ ಎಂದು 'ಎನ್ಡಿಟಿವಿ' ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಇರಾನ್ನ ಸರ್ಕಾರಿ ಸ್ಥಳಗಳನ್ನು ಗುರಿಯಾಗಿಸಿಕೊಂಡ ಇಸ್ರೇಲ್; ಟೆಹ್ರಾನ್ನ ಎವಿನ್ ಜೈಲಿನ ಮೇಲೆ ದಾಳಿ| israel vs iran
ವೃದ್ಧೆ ಚರ್ಮದ ಕ್ಯಾನ್ಸರ್ನಿಂದ ಬಳಲುತ್ತಿರುವುದು ಸ್ಪಷ್ಟವಾಗಿದೆ. ಚಿಕಿತ್ಸೆಯ ನಡುವೆಯೇ ತನ್ನ ಕುಟುಂಬ ಸದಸ್ಯರ ಎರಡು ಪ್ರತ್ಯೇಕ ವಿಳಾಸಗಳನ್ನು ಹಂಚಿಕೊಂಡಿದ್ದಾರೆ. ಒಂದು ಮಲಾಡ್ ಮತ್ತು ಇನ್ನೊಂದು ಕಾಂಡಿವಲಿ ಎನ್ನಲಾಗಿದೆ. ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು, ವೃದ್ಧೆಯ ಕುಟುಂಬಸ್ಥರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸಂಬಂಧಿಕರ ಸುಳಿವಿಗೆ ವೃದ್ಧೆಯ ಫೋಟೋವನ್ನು ವಿವಿಧ ಪೊಲೀಸ್ ಠಾಣೆಗಳಲ್ಲಿ ಹಂಚಿಕೊಳ್ಳಲಾಗಿದೆ,(ಏಜೆನ್ಸೀಸ್).