ನ್ಯೂಸ್

ಕೆನಡಾದಲ್ಲಿ ಲಾಕ್​ಡೌನ್ ಜತೆಗೆ ಗಡಿಪ್ರದೇಶಗಳು ಬಂದ್​ ಕರೊನಾ ಪ್ರಕರಣ ಇಳಿಕೆ

vinaymk1969

ಕೆನಡಾದಲ್ಲಿ ಕರೊನಾ ಸಾಂಕ್ರಾಮಿಕದ ಮೊದಲ ಕೇಸು ಪತ್ತೆಯಾಗಿದ್ದು ಜನವರಿ 27ರಂದು. ಚೀನಾದ ಹುಬೈ, ವುಹಾನ್​ನಿಂದ ಟೊರೊಂಟೊಗೆ ಮರಳಿದ್ದ ವ್ಯಕ್ತಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಮೇ 29ರ ವೇಳೆಗೆ ಇಲ್ಲಿ 89,400ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 47,518 ಮಂದಿ ಗುಣಮುಖರಾಗಿದ್ದರೆ, 6,979 ಮಂದಿ ಮೃತಪಟ್ಟಿದ್ದಾರೆ. ಆದರೆ, ಕಳೆದ ನಾಲ್ಕು ದಿನಗಳಲ್ಲಿ 1000ಕ್ಕಿಂತ ಕಡಿಮೆ ಕೇಸುಗಳು ದಾಖಲಾಗಿದ್ದು, ಸಣ್ಣ ಮಟ್ಟಿನ ಇಳಿಕೆ ಕಂಡಿರುವುದು ಸಮಾಧಾನಕರ ವಿಷಯ ಎಂದು ಸರ್ಕಾರ ಹೇಳಿದೆ.

ಕೆನಡಾದಲ್ಲಿ ಎಲ್ಲಿ ಹೆಚ್ಚು ಜನಸಂಖ್ಯೆಯಿದೆಯೋ ಅಲ್ಲಿ ಕರೊನಾ ಕೇಸುಗಳು ಕಂಡುಬಂದಿವೆ. ಒಂಟಾರಿಯೊದಲ್ಲಿ 27,210 ಪ್ರಕರಣಗಳು, 2,230 ಸಾವು ಮತ್ತು ಕ್ವಿಬೆಕ್​ನಲ್ಲಿ 50,232 ಪ್ರಕರಣಗಳು, 4,363 ಸಾವಿನ ಪ್ರಕರಣ ದಾಖಲಾಗಿದೆ. ನುನಾವುಟ್ ಹೊರತುಪಡಿಸಿ, ಕೆನಡಾದ ಎಲ್ಲ ಪ್ರಾಂತ್ಯಗಳಲ್ಲಿ ಕರೊನಾ ಪತ್ತೆಯಾಗಿದೆ. ಕೆನಡಾದಲ್ಲಿ ಸಮುದಾಯ ಪ್ರಸರಣದ ಮೊದಲ ಪ್ರಕರಣವನ್ನು ಮಾರ್ಚ್ 5ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ ದೃಢಪಡಿಸಲಾಯಿತು. ಲಾಕ್​ಡೌನ್ ಜತೆಗೆ ಕೆನಡಾ ತನ್ನ ಗಡಿಪ್ರದೇಶಗಳನ್ನು ನಿರ್ಬಂಧಿಸಿದೆ. ವೈರಸ್​ಗೆ ತುತ್ತಾದ ಕೆನಡಿಯನ್ನರಲ್ಲಿ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಪತ್ನಿ ಸೋಫಿ ಗ್ರೆಗೊಯಿರ್ ಟ್ರುಡೊ ಕೂಡ ಇದ್ದಾರೆ. ಮಾರ್ಚ್ 12 ರಂದು ಅವರಲ್ಲಿ ವೈರಸ್ ಕಂಡುಬಂದಿತ್ತು. ನಂತರ ಕುಟುಂಬವು ಸ್ವಯಂ-ದಿಗ್ಬಂಧನಕ್ಕೆ ಒಳಪಟ್ಟಿತು. ಮಾರ್ಚ್ 28ರ ವೇಳೆಗೆ ಅವರು ಚೇತರಿಸಿಕೊಂಡರು.

ಕೇರಳದ ಡಾಕ್ಟರ್ ಪಬ್ಲಿಕ್ ಹೀರೋ: ಕೆನಡಾದ ಒಂಟಾರಿಯೊದಲ್ಲಿ ಕೊವಿಡ್ 19 ನಿಯಂತ್ರಣಾ ಕ್ರಮಗಳ ಉಸ್ತುವಾರಿ ವಹಿಸಿರುವ ಕೇರಳ ಮೂಲದ ಡಾ.ವಿದ್ಯಾ ಸುನಿಲ್, ತಮ್ಮ ಸೇವೆಯಿಂದಾಗಿಯೇ ಅಲ್ಲಿ ಜನಪ್ರಿಯರಾಗಿದ್ದಾರೆ. ಒಂಟಾರಿಯೊ ಸಾರ್ವಜನಿಕ ಆರೋಗ್ಯ ಸಂಘವು ಅವರನ್ನು ‘ಪಬ್ಲಿಕ್ ಹೆಲ್ತ್ ಹೀರೋ’ ಎಂದು ಗುರುತಿಸಿದೆ. ಡಾ. ವಿದ್ಯಾ ಕೊಲ್ಲಂನ ಕೈರಾಲಿ ನಗರದ ದಿ.ಕುಮಾರ್ ಕಿಣಿ ಮತ್ತು ವಿಜಯಲಕ್ಷ್ಮಿ ಎಂಬುವರ ಪುತ್ರಿ. ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳ ಬಗ್ಗೆ ಸಂಶೋಧನೆ ನಡೆಸಿರುವ ಡಾ.ವಿದ್ಯಾ, ಒಂಟಾರಿಯೊ ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ 14 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕೊಲ್ಲಂ ವಿಮಲಾ ಹೃದಯ ಶಾಲೆ ಮತ್ತು ಎಸ್.ಎನ್. ಮಹಿಳಾ ಕಾಲೇಜಿನಲ್ಲಿ ಅಧ್ಯಯನ ಮುಗಿಸಿದ ನಂತರ, ಅವರು ಮನ್ನುತಿ ಪಶುವೈದ್ಯಕೀಯ ಕಾಲೇಜಿನಿಂದ ಪಶುವೈದ್ಯಕೀಯ ವಿಜ್ಞಾನದಲ್ಲಿ ಪದವಿ ಪಡೆದರು. ಕೆನಡಾದಲ್ಲಿ ಸಾರ್ವಜನಿಕ ಆರೋಗ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಕೆನಡಾದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರ ತರಬೇತಿ ಪಡೆದಿದ್ದಾರೆ. ಪ್ರಾಣಿಗಳಿಂದ ಮಾನವನಿಗೆ ಹರಡುವ ರೋಗಗಳ ಪೈಕಿ ಶೇಕಡ 70 ರಷ್ಟು ಕಾಡುಪ್ರಾಣಿಗಳಿಂದ ಹರಡುತ್ತವೆ. ಕರೊನಾ ರೋಗವೂ ಅಂತಹ ಪ್ರಾಣಿಗಳಿಂದಲೇ ಹರಡಿದೆ ಎನ್ನುವುದು ವೈಜ್ಞಾನಿಕ ತಜ್ಞರ ಅಭಿಮತ.

ಅಕ್ಟೋಬರ್​ವರೆಗೆ ಕ್ರೂಸ್ ಹಡಗುಗಳ ಸಂಚಾರ ನಿರ್ಬಂಧ: ಕರೊನಾದಿಂದಾಗಿ ಅಕ್ಟೋಬರ್ 31ರವರೆಗೆ ಕೆನಡಾದಲ್ಲಿ ಬೃಹತ್ ಕ್ರೂಸ್ ಹಡಗುಗಳು ಕಾರ್ಯನಿರ್ವಹಿಸುವುದರ ಮೇಲೆ ಸರ್ಕಾರ ನಿರ್ಬಂಧ ಹೇರಿದೆ. ಜುಲೈ 1ರ ನಂತರ ಸಣ್ಣ ಹಡಗುಗಳ ಕಾರ್ಯನಿರ್ವಹಣೆಗೆ ಅನುಮತಿ ನೀಡಲಾಗಿದೆ. 12ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ಹಡಗುಗಳ ಸಂಚಾರಕ್ಕೆ ಅನುಮತಿ ಇಲ್ಲ. ಕಳೆದ ವರ್ಷ, 140 ಕ್ರೂಸ್ ಹಡಗುಗಳು ಕೆನಡಾದ ಬಂದರುಗಳಲ್ಲಿ 2 ದಶಲಕ್ಷಕ್ಕೂ ಹೆಚ್ಚು ಪ್ರವಾಸಿಗರ ಪ್ರಯಾಣಕ್ಕೆ ಸಾಕ್ಷಿಯಾಗಿದ್ದವು. ಕೆನಡಾದ ಆರ್ಥಿಕತೆಗೆ ಕ್ರೂಸ್ ಹಡಗುಗಳು 3 ಬಿಲಿಯನ್ ಕೆನಡಿಯನ್ (ಯುಎಸ್ 2.1 ಬಿಲಿಯನ್) ಗಿಂತಲೂ ಹೆಚ್ಚು ಲಾಭದ ಕೊಡುಗೆ ನೀಡಿವೆ. ಕೆನಡಾದ 23,000ಕ್ಕೂ ಹೆಚ್ಚು ಮಂದಿ ಕ್ರೂಸ್ ಹಡಗುಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ನೌಕರಿ ಕಂಡುಕೊಂಡಿದ್ದಾರೆ.