ನವದೆಹಲಿ: ಆಹಾರಕ್ಕಾಗಿ ಕಾಡೆಲ್ಲಾ ಅಲೆಯುವಾಗ ಚಿರತೆ ಇತರೆ ಪ್ರಾಣಿಗಳೊಂದಿಗೆ ಕಾದಾಡುವುದನ್ನು ನೋಡಿದ್ದೇವೆ. ತನಗಿಂತಲೂ ದೈತ್ಯ ಪ್ರಾಣಿಗಳನ್ನೇ ಬೇಟೆಯಾಡುವ ಚಿರತೆ ಒಂದು ಸಣ್ಣ ಕಪ್ಪೆಗೆ ಹೆದರುವುದೇ? ಈ ಕೆಳಗಿನ ವಿಡಿಯೋ ನೋಡಿದ ಮೇಲಂತೂ ಅದು ನಿಜವೆನಿಸುತ್ತಿದೆ.
ಭಾರತೀಯ ಅರಣ್ಯಾಧಿಕಾರಿ ಸುಸಾಂತ್ ನಂದಾ ಅವರು ತಮ್ಮ ಟ್ವಿಟರ್ನಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಿ, ಕಾಲವು ಬದಲಾಗಿದೆ. ಚಿರತೆ ಮತ್ತು ಕಪ್ಪೆಯ ನಡುವೆ ಯಾರೂ ನಂಬಲಾಗದ ಕಾಳಗವೊಂದು ನಡೆದಿದೆ. ಇದರಲ್ಲಿ ಕೊನೆಗೆ ಗೆಲ್ಲುವುದು ಯಾರೆಂದು ನೋಡಿ ಎಂದು ಅಡಿಬರಹ ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ?: 18 ಸೆಕೆಂಡಿನ ವಿಡಿಯೋದಲ್ಲಿ ಚಿರತೆಯು ಕಪ್ಪೆಯ ಎದುರು-ಬದುರು ನಿಂತಿರುತ್ತದೆ. ತನ್ನ ಬಲಿಷ್ಠ ಕಾಲುಗಳಿಂದ ಚಿರತೆ ಕಪ್ಪೆಯನ್ನು ಸ್ಪರ್ಶಿಸುತ್ತದೆ. ಅದಾದ ಕೆಲವೇ ಸೆಕೆಂಡುಗಳಲ್ಲಿ ಕಪ್ಪೆ ಅಗಲವಾದ ಬಾಯಿ ತೆಗದು ಚಿರತೆಯ ಮುಂದಕ್ಕೆ ಜಿಗಿಯುತ್ತದೆ. ಮತ್ತೆ ಚಿರತೆ ತನ್ನ ಕಾಲುಗಳಿಂದ ಕಪ್ಪೆಯ ಮೇಲೆ ಎರಡು ಬಾರಿ ಸ್ಪರ್ಶಿಸುತ್ತದೆ. ಆದರೆ, ಯಾವುದಕ್ಕೂ ಜಗ್ಗದ ಕಪ್ಪೆಯನ್ನು ನೋಡಿ ಚಿರತೆ ಅಲ್ಲಿಂದ ಕಾಲ್ಕಿಳುತ್ತದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈಗಾಗಲೇ 5 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಅನೇಕ ನೆಟ್ಟಿಗರು ಕಪ್ಪೆಯ ದಿಟ್ಟತನವನ್ನು ಮೆಚ್ಚಿ ಕಾಮೆಂಟ್ಗಳ ಸುರಿಮಳೆಗೈದಿದ್ದಾರೆ. (ಏಜೆನ್ಸೀಸ್)