ನ್ಯೂಸ್

ಡ್ರಗ್ಸ್​ ಪ್ರಕರಣದಲ್ಲಿ ಸಚಿವರ ಅಳಿಯನ ಹೆಸರು; ವಿಚಾರಣೆ ನಡೆಸಿದ ಎನ್​ಸಿಬಿ ಅಧಿಕಾರಿಗಳು

ಮುಂಬೈ: ಬಾಲಿವುಡ್​ ಡ್ರಗ್ಸ್​ ಪ್ರಕರಣದಲ್ಲಿ ಇದೀಗ ಮಹಾರಾಷ್ಟ್ರ ಸಚಿವ ನವಾಬ್​ ಮಲಿಕ್ ಅವರ ಅಳಿಯ ಸಮೀರ್​ ಖಾನ್​ ಅವರ ಹೆಸರು ಕೇಳಿಬಂದಿದೆ. ಈ ವಿಚಾರವಾಗಿ ಸಮೀರ್​ ಖಾನ್​ರನ್ನು ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ ಅಧಿಕಾರಿಗಳು ವಿಚಾರಣೆ ನಡೆಸಿರುವುದಾಗಿ ಹೇಳಲಾಗಿದೆ.

ಕಳೆದ ವಾರ ಡ್ರಗ್ಸ್​ ಮಾರಾಟದ ಆರೋಪದಡಿಯಲ್ಲಿ ಬ್ರಿಟಿಷ್​ ಪ್ರಜೆ ಕರಣ್​ ಅಜ್ನಾನಿ ಮತ್ತಿಬ್ಬರನ್ನು ಬಂಧಿಸಲಾಗಿತ್ತು. ಅವರ ಬಳಿ 200 ಕೆಜಿ ಡ್ರಗ್ಸ್​ ವಶ ಪಡಿಸಿಕೊಳ್ಳಲಾಗಿತ್ತು. ಅವರೊಂದಿಗೆ ಸಮೀರ್​ ಖಾನ್​ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಅದೇ ಆರೋಪದಲ್ಲಿ ಇದೀಗ ಸಮೀರ್​ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮುಂಬೈ ದಕ್ಷಿಣದ ಎನ್​ಸಿಬಿ ಕಚೇರಿಗೆ ಸಮೀರ್​ ಬುಧವಾರ ಬೆಳಗ್ಗೆ 10 ಗಂಟೆಗೆ ಬಂದಿದ್ದು, ವಿಚಾರಣೆಗೆ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಲೆಬ್ರಿಟಿಗಳು ಆಗಾಗ್ಗೆ ಭೇಟಿ ನೀಡುವ ಮುಂಬೈನ ಪ್ರಸಿದ್ಧ 'ಮುಚಾದ್ ಪಾನ್ವಾಲಾ' ಅಂಗಡಿಯ ಮಾಲೀಕರಲ್ಲಿ ಒಬ್ಬರಾದ ರಾಮ್‌ಕುಮಾರ್ ತಿವಾರಿ ಅವರನ್ನು ಸಂಸ್ಥೆ ಮಂಗಳವಾರ ಬಂಧಿಸಿದೆ. (ಏಜೆನ್ಸೀಸ್​)