ಬೆಂಗಳೂರು: ಇಂದಿನಿಂದ ಬಸ್ ಸಂಚಾರಕ್ಕೆ ಸರ್ಕಾರವೇನೋ ಅನುವು ಮಾಡಿಕೊಟ್ಟಿದೆ. ಆದರೆ, ಸರ್ಕಾರದ ಅವೈಜ್ಞಾನಿಕ ಸಂಚಾರ ಮಾರ್ಗಸೂಚಿಯು ಗೊಂದಲದ ಗೂಡಾಗಿದ್ದು, ಬಸ್ ಸಿಬ್ಬಂದಿ ಹಾಗೂ ಪ್ರಯಾಣಿಕರು ಪರದಾಡುವಂತಾಗಿದೆ.
ಬೆಳಗ್ಗೆ ಏಳು ಗಂಟೆಯಿಂದ ರಾತ್ರಿ ಏಳು ಗಂಟೆಯವರೆಗೆ ಮಾತ್ರ ಸರ್ಕಾರ ಸಂಚಾರಕ್ಕೆ ಅನುಮತಿ ನೀಡಿದೆ. ಇದರಿಂದ ಖಷಿಯಾದ ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ದೌಡಾಯಿಸಿದ್ದಾರೆ. ಆದರೆ ಬೀದರ್ ಹಾಗೂ ರಾಯಚೂರು ಸೇರಿದಂತೆ ದೂರದ ಊರುಗಳಿಗೆ ನಿಗದಿತ 7 ಗಂಟೆ ಅವಧಿಯಲ್ಲಿ ಪ್ರಯಾಣಿಸಲು ಸಾಧ್ಯವೇ ಎಂಬುದು ಪ್ರಶ್ನೆಯಾಗಿದೆ. ಒಂದು ವೇಳೆ ಸಾಧ್ಯವಾದರೂ ಅಲ್ಲಿಂದ ತಮ್ಮ ಹಳ್ಳಿಗಳಿಗೆ ಹೋಗಲು ಅವರಿಗೆ ಬಸ್ ವ್ಯವಸ್ಥೆ ಇರುತ್ತದೆಯೇ?. ನಂತರ ಅವರೇನು ಮಾಡಬೇಕೆಂಬುದನ್ನು ಯೋಚಿಸಬೇಕಾಗಿದೆ.
ಊಟದ ವ್ಯವಸ್ಥೆ ಹೇಗೆ?:
ದೂರದ ಪ್ರಯಾಣದ ವೇಳೆ ಮಾರ್ಗ ಮಧ್ಯೆ ಪ್ರಯಾಣಿಕರಿಗೆ ಊಟದ ವ್ಯವಸ್ಥೆ ಹೇಗೆ ಎಂಬುದು ಸಹ ಗೊಂದಲವನ್ನುಂಟು ಮಾಡಿದೆ. ಹೋಟೆಲ್ಗಳನ್ನು ತೆರೆಯಲು ಅವಕಾಶವಿದ್ದರೂ ಪಾರ್ಸೆಲ್ ಮಾತ್ರ ತೆಗೆದುಕೊಳ್ಳಲು ಅವಕಾಶ ಇದೆ. ಇನ್ನು ಪಾರ್ಸೆಲ್ಗೆ ಸಮಯ ತೆಗೆದುಕೊಳ್ಳುವುದಲ್ಲದೇ, ಅದನ್ನು ತಂದು ಬಸ್ನಲ್ಲಿ ತಿನ್ನುವ ವ್ಯವಸ್ಥೆ ಇದೆಯೇ? ಹೀಗಾಗಿ ದೂರದ ಊರುಗಳಿಗೆ ಪ್ರಯಾಣಿಸುವಾಗ ಯಾವ ಕ್ರಮಗಳನ್ನು ಅನುಸರಿಸಬೇಕೆಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸದಿರುವುದು ಇದೀಗ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.
ಪ್ರಯಾಣಿಕರ ಪರದಾಟ:
10 ಗಂಟೆಯ ನಂತರ ಉತ್ತರ ಕರ್ನಾಟಕದ ದೂರದ ಕೆಲವು ಊರುಗಳಿಗೆ ಬಸ್ ಇರುವುದಿಲ್ಲ ಎಂಬ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರ ಹೇಳಿಕೆ ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿ ಮಾಡಿತು. ಈಗಾಗಲೇ ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಈ ಹೇಳಿಕೆಯಿಂದ ತಬ್ಬಿಬ್ಬಾಗಿದ್ದು, ಏನು ಮಾಡುವುದು ಎಂಬ ಯೋಚನೆಯಲ್ಲಿದ್ದರು. ಅಲ್ಲದೆ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಇದರಿಂದ ಎಚ್ಚೆತ್ತಿರುವ ಸರ್ಕಾರ ಉತ್ತರ ಕರ್ನಾಟಕಕ್ಕೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಆದರೆ, ಅವಧಿಯ ಮಿತಿ ಹೇರಿರುವುದರಿಂದ ನಿಗದಿತ ಸಮಯದಲ್ಲಿ ದೂರದ ಊರುಗಳಿಗೆ ಹೇಗೆ ತಲುಪುತ್ತಾರೆ ಎಂಬುದೇ ಇಲ್ಲಿ ಯಕ್ಷ ಪ್ರಶ್ನೆಯಾಗಿದೆ.